Sunday, 27 November 2011

ಆತ್ಮೀಯತೆಯಿಂದ

ಎರಡು ಬೀಜಗಳು ಹೇಗೋ ಎಂತೋ ಸತ್ವಪೂರ್ಣ ಮಣ್ಣಿನಡಿ ಸೇರಿಹೋದವು.  ಕೆಲ ದಿನಗಳ ನಂತರ ಒಂದು ಬೀಜಕ್ಕೆ ಮೊಳೆಯುವ, ಬೆಳೆಯುವ ಇಚ್ಛೆಯಾಯಿತು. ಅದು ಎರಡನೆಯ ಬೀಜವನ್ನು ಕುರಿತು ಹೇಳಿತು. ನನಗೆ ಬೆಳೆಯಬೇಕೆನಿಸುತ್ತಿದೆ. ನನ್ನ ಬೇರುಗಳನ್ನು ಈ ಮಣ್ಣಿನಾಳಕ್ಕೆ ಇಳಿಸಿ, ನನ್ನ ಚಿಗುರುಗಳನ್ನು ಮಣ್ಣಿನಿಂದ ಮೇಲಕ್ಕೆ ಎತ್ತಿ ಕಳುಹಿಸಿ, ಆಹಾ! ನನ್ನ ಎಳೆಯ ಹಸಿರು-ಹಸಿರಾದ ಚಿಗುರುಗಳು ವಸಂತನ ಆಗಮನವನ್ನು ಸಾರುವ ಪತಾಕೆಗಳಂತೆ ಕಾಣುವುದು ಎಂಥಾ ಆಹ್ಲಾದಕರ ಅನುಭವ. ಸೂರ್ಯನ ಎಳೆಯ ಕಿರಣಗಳು ನನ್ನ ಮೇಲೆ ಮುದುಡಿ ಮಲಗಿರುವ ಇಬ್ಬನಿಯ ಹನಿಗಳನ್ನು ಮುತ್ತಿಡುವಾಗ ಆಗುವ ಸಂತೋಷಕ್ಕೆ ಸಾಟಿ ಇರದು.


     ಎರಡನೆಯ ಬೀಜ ಹೇಳಿತು - ಗೆಳೆಯಾ, ನಾನೊಲ್ಲೆ. ನನಗೆ ಭಯ. ನನ್ನ ಬೇರುಗಳು ನೆಲದಾಳಕ್ಕಿಳಿಯುವಾಗ ಆ ಕತ್ತಲಲ್ಲಿ ಏನೇನು ಅಡಗಿದೆಯೋ ನೆನೆಸಿದರೆ ಎದೆ ನಡುಗುತ್ತದೆ. ಇನ್ನು ನನ್ನ ಚಿಗುರುಗಳನ್ನು ಹುಳು-ಹುಪ್ಪಟ್ಟೆಗಳು ಕಚ್ಚಿ ತಿನ್ನುವಾಗ ಎಂಥ ನೋವಾಗುತ್ತದೋ? ಬೇಡ, ಪ್ರಾಣಿಗಳ ಮನುಷ್ಯರ ಕಾಲ ಕೆಳಗೆ ಸಿಲುಕಿ ನಾನು ಅಪ್ಪಚ್ಚಿಯಾದರೆ....? ಅಯ್ಯಯ್ಯೋ ಬೇಡವೇ ಬೇಡ. ಅತ್ತ ತೀರ ನೆಲದಾಳವೂ ಅಲ್ಲ ಮೇಲಕ್ಕೂ ಅಲ್ಲ, ಈ ಕತ್ತಲ ಕವಚದಲ್ಲೇ ನಾನು ಸುಖವಾಗಿದ್ದೇನೆ. ನನಗೆ ನಿನ್ನಂಥ ಯಾವ ಆಸೆಯೂ ಇಲ್ಲ.

     ಮೊದಲನೆಯ ಬೀಜ ಚಿಗುರಿತು. ನೆಲದಾಳದಲ್ಲಿ ಅಡಗಿದ್ದ ಸತ್ವವನ್ನು ಮೆದ್ದು ಹೆಮ್ಮರವಾಯಿತು. ಪುಷ್ಪ, ಫಲ, ನೆರಳುಗಳಿಂದ ಎಲ್ಲರಿಗೂ ಪ್ರಿಯವಾಯಿತು. 
     ಮತ್ತೊಂದು ಬೀಜ....?!  ಹುಂಜವೊಂದು ಆಹಾರ ಹುಡುಕುತ್ತಾ ಇರುವಾಗ ಮಣ್ಣಿನಡಿಯಲ್ಲಿ ಅವಿತಿದ್ದ ಬೀಜವನ್ನು ಕಂಡಿತು. ಕೊಕ್ಕಿನಿಂದ ಹೆಕ್ಕಿ ಬೀಜವನ್ನು ಹೊಟ್ಟೆಗಿಳಿಸಿತು. ಬೀಜ ಅಲ್ಲಿ ಸೇರಿ ಜೀರ್ಣಶೇಷವಾಗಿ ತನ್ನ ಅಂತ್ಯ ಕಂಡಿತು. 
ಈ ಸಂಸಾರದಲ್ಲೂ ಎರಡು ರೀತಿಯ ಮನುಷ್ಯರಿದ್ದಾರೆ. ಒಂದು ವರ್ಗ ಬದುಕನ್ನು ಕಟ್ಟುವವರು. ಇನ್ನೊಂದು ವರ್ಗ ಇರುವುದಷ್ಟೇ ಸ್ವರ್ಗ, ಮುಂದುವರೆದರೆ ಹೇಗೋ-ಏನೋ ಎಂದು ಹೆದರುತ್ತಾ ಅಳುಕುತ್ತಾ ಪ್ರತೀ ದಿನವೂ ಸಾಯುತ್ತಲೇ ಬದುಕುವವರು. ಮೊದಲ ವರ್ಗದವರಲ್ಲಿ ಹೊಸತನ್ನು ಕಾಣುವ ಸೂಕ್ಷ್ಮತೆ ಇರುತ್ತದೆ. ಕಂಡ ಕನಸನ್ನು ಸಾಕಾರಗೊಳಿಸುವ ಗುರಿ, ಆತ್ಮವಿಶ್ವಾಸವಿರುತ್ತದೆ. ಇದಕ್ಕಾಗಿ ಅವರು ಎಷ್ಟೇ ಕಷ್ಟಪಡಲೂ ತಯಾರಿರುತ್ತಾರೆ. ಬಹುತೇಕವಾಗಿ ಯಶಸ್ವಿಗಳೂ ಆಗುತ್ತಾರೆ. ಬದುಕಿನ ಪ್ರತಿಯೊಂದು ಹೆಜ್ಜೆಯೂ ದಿಟ್ಟತನದ ಹೆಜ್ಜೆಯಾದಾಗ ವಿಧಿಯೂ ತಲೆಬಾಗುತ್ತದೆ ಎಂಬ ಮಾತಿದೆ.

     ಜೀವಿ ಜನುಮಕ್ಕೆ ಬರುವಾಗ ಯಾವುದೇ ಕಾಮನೆಗಳನ್ನು ತನ್ನೊಂದಿಗೆ ಹೊತ್ತು ತರುವುದಿಲ್ಲ. ಬೆಳೆಯುತ್ತಾ ಈ ಕಾಮನೆಗಳೂ ನಾನಾ ರೂಪದಿಂದ ಅವನನ್ನು ಮುತ್ತುತ್ತವೆ. ಬದುಕು ಗೊಂದಲಗಳ ಗೂಡಾಗುತ್ತದೆ. ಅವನಿಗೆ ಗೊತ್ತಿರುವ ಬದುಕು ಓದು-ವೃತ್ತಿ-ಮದುವೆ-ಸಂಸಾರ-ಧನಾರ್ಜನೆ-ಕೀತರ್ಿ-ಸಾಮಾಜಿಕ ಮನ್ನಣೆ ಇಷ್ಟೇ. ಇದರ ಹೊರಗೊಂದು ಪ್ರಪಂಚವಿದೆ ಎನ್ನುವುದನ್ನು ಅರಿಯದೇ ಬದುಕು ಕೊನೆಗಾಣಿಸುವವರೇ ಹೆಚ್ಚು ಮಂದಿ. ಕೆಲವೇ ಕೆಲವು ಮಂದಿ ಈ ಬದುಕಿನಾಚೆಯ ಪ್ರಪಂಚದಲ್ಲಿ ಯಾವ್ಯಾವುದೋ ಕಾರಣಗಳಿಂದ ಹೆಜ್ಜೆ ಇಡುತ್ತಾರೆ. ಅರಿವಿರದ ಅಪರಿಚಿತ ಪ್ರಪಂಚವಿದು. ಇಲ್ಲಿ ಯಾವ ತಿರುವಿನಲ್ಲಿ ಏನು ಎದುರಾಗಬಹುದೋ ತಿಳಿಯದು. ಇಂಥ ಪರಿಸ್ಥಿತಿಯಲ್ಲಿ ಮೊದಲ ಹೆಜ್ಜೆಯಿಂದಲೇ ಹಿಂದೆ ತಿರುಗುವವರು ಹಲವರು. ಕೆಲವೇ ಕೆಲವು ಹೆಜ್ಜೆ ಹಾಕಿ ಇದು ನಮಗಾಗದು ಎಂದು ಬೆನ್ನು ಹಾಕುವವರು ಮತ್ತೆ ಕೆಲವರು. ಮತ್ತೂ ಮುಂದೆ ನಡೆದು ಅದರ ಆನಂದದ ಸವಿ ಕಂಡವರು ಹಿಂತಿರುಗಿ ನೋಡರು. ಇವರೇ ಸಾಧಕರು, ಯಶಸ್ವಿಗಳು.

     ಈ ಯಶಸ್ವಿಗಳನ್ನೂ ಎರಡು ವಿಧಗಳಲ್ಲಿ ಪರಾಮಶರ್ಿಸಬಹುದು. ಗೆದ್ದವರು ಅಥವಾ ಗೆಲ್ಲಹೊರಟವರು. ಇವರಿಬ್ಬರೂ ಇಡುವ ಮೊದಲ ಹೆಜ್ಜೆಯಲ್ಲಿ ಅನುಮಾನ ಭಯಗಳಿಲ್ಲ. ಯಾಕೆಂದರೆ ಎಲ್ಲಿ ಭಯ, ಅನುಮಾನಗಳಿವೆಯೋ ಅಲ್ಲಿ ವಿಶ್ವಾಸ, ಸ್ಥೈರ್ಯ, ಅಭಿಮಾನಗಳಿರುವುದಿಲ್ಲ. ಒಮ್ಮೆ ಇವುಗಳಿರುವಲ್ಲಿ ನೆಲಯೂರಿದೆವೋ ಅಲ್ಲಿ ಕಾಮನಬಿಲ್ಲುಗಳುಂಟಾಗುತ್ತವೆ. ಆದರೂ ಕಾಮನಬಿಲ್ಲಿರುವಲ್ಲಿ ಮಳೆಯ ಮೋಡಗಳೂ ಇರುತ್ತವೆ ಎನ್ನುವುದನ್ನು ಮರೆಯುವಂತಿಲ್ಲ. ಮಳೆ ಸುರಿಯಲೂಬಹುದು-ಚದುರಲೂಬಹುದು. ವ್ಯತ್ಯಾಸವೆಂದರೆ, ಮೋಡಗಳು ಕತ್ತಲನ್ನುಂಟುಮಾಡುವುದಿಲ್ಲ. ಏಕೆಂದರೆ ಸೂರ್ಯನ ಹೊಂಗಿರಣಗಳೂ ಅಲ್ಲಿರುತ್ತವೆ. ಇವೆಲ್ಲವೂ ಒಂದು ಸಮತೋಲದಲ್ಲಿರುತ್ತವೆ. ಇದು ಪ್ರಕೃತಿ ತನ್ನೊಳಗಡಗಿಸಿಟ್ಟುಕೊಂಡಿರುವ ಒಂದು ರಹಸ್ಯ ಎನಿಸುತ್ತದೆ.

     ಚಿಗುರ ಹೊರಟ ಬೀಜ ಯಾವುದೇ ಸದ್ದುಗದ್ದಲ ಮಾಡದೆ ನಿಶ್ಶಬ್ದವಾಗಿ, ಉದ್ವೇಗವಿಲ್ಲದೆ ನಿರಾಯಾಸವಾಗಿ ಚಿಗುರಿ ಬೆಳೆಯುತ್ತದೆ. ಮುಂದೆ ಹೂವು, ಹಣ್ಣು ಬಿಡುವಾಗಲೂ ಇದೇ ನಿರಾಯಾಸ ಪ್ರಕ್ರಿಯೆ ಮುಂದುವರೆಯುತ್ತದೆ. ಎಲ್ಲಿ ಈ ಪರಿಯ ಕ್ರಿಯೆ ನಡೆಯುತ್ತದೋ ಅಲ್ಲಿ ಆಗ ಅದು ಪ್ರಕೃತಿಯೊಂದಿಗೆ ಸಮತೋಲನದಲ್ಲಿ ಏಕಮತದಿಂದ ಸಾಮರಸ್ಯದಿಂದ ಇರಬಹುದು ಎನಿಸುತ್ತದೆ. ಈ ಸಮರಸವನ್ನು ನಾವೂ ಅರಿತು, ಹಣ, ಹೆಸರು, ಕೀತರ್ಿಗಳಿಗೆ ಮನಮಾಡದೆ, ನೋವು, ನಲಿವು ಎಲ್ಲವನ್ನೂ ಸಮತೋಲನದಲ್ಲಿರಿಸಿ ಪರಿಶ್ರಮದಿ ಪ್ರಯತ್ನಿಸಿ, ನಮ್ಮ ಬದುಕನ್ನೂ  ಸಾಧನೆಯ ಹಾದಿಯೆಡೆಗೆ ಉಪಚರಿಸುವಂತೆ ಮಾಡಿ ಯಶಸ್ವಿಗಳಾಗಬಹುದು. ಅಲ್ಲವೇ....? ನೀವೇನಂತೀರಿ 

No comments:

Post a Comment