Sunday, 27 November 2011

ಶರನ್ನವರಾತ್ರಿ - ಆಯುಧಪೂಜಾ


ಶರದ್ರುತುರಾಜನು ಬಂತೆಂದರೆ ದೇಶದೆಲ್ಲಡೆ ನವರಾತ್ರಿ-ದಸರೆಯ ಸಡಗರವೋ ಸಡಗರ. ಇದು ಭೂಮಿಯ ಹಬ್ಬ. ಯುಗಾದಿಯು ಕಲಿಯುಗದ ಆದಿಯಾದರೆ, ನವರಾತ್ರಿ ಈ ಧರೆಯ ಆದಿಯೆಂದು ಪ್ರತೀತಿ ಇದೆ. ಅಂತಹ ನವರಾತ್ರಿಯಲ್ಲಿ ಆಯುಧಪೂಜೆಗೆ ಹೆಚ್ಚು ಪ್ರಾಶಸ್ತ್ಯ. ಇದು ಯಾವುದೇ ವರ್ಗಕ್ಕೆ, ಕುಟುಂಬಕ್ಕೆ ಸೀಮಿತವಾಗಿರದೆ ಎಲ್ಲರೂ ತಾವು ನಿತ್ಯವೂ ಬಳಸುವ ಆಯುಧಗಳಿಗೆ ಪೂಜಿಸುವ ಹಬ್ಬ. ಯಂತ್ರೋಪಕರಣಗಳು, ವಿದ್ಯುನ್ಮಾನ ಸಲಕರಣೆಗಳು, ನಿತ್ಯವೂ ಬಳಸುವ ಆಯುಧಗಳು, ವಾಹನಗಳು ಇತ್ಯಾದಿ ಹೀಗೆ ಹತ್ತು ಹಲವು ಬಗೆಬಗೆ ಆಯುಧಗಳನ್ನು ಶುಭ್ರಗೊಳಿಸಿ ಭಕ್ತಿಯಿಂದ ಎಲ್ಲವೂ ಶುಭವಿದ್ದು ಮುಂದೆಯೂ ಸುಖತರಲೆಂದು ಪ್ರಾರ್ಥಿಸುವ ಹಬ್ಬ.


ಬೇಸ್ನಲ್ಲೂ ಕೂಡ ಆಯುಧಪೂಜೆ ಏರ್ಪಾಟಾಗಿತ್ತು. ಎಲ್ಲ ರೀತಿಯ ಸಲಕರಣೆಗಳನ್ನು ಶುಭ್ರಗೊಳಿಸಿ ಪೂಜಿಸಲಾಯಿತು. ಪುಸ್ತಕಗಳಿಗೆ ಪೂಜೆ ಸಲ್ಲಿಸಿ ಸರಸ್ವತಿಪೂಜೆಯನ್ನೂ ಮಾಡಲಾಯಿತು. ಪೂರ್ವನಿಯೋಜಿತದಂತೆ ಅಕ್ಟೋಬರ್ 4ರ ಮಂಗಳವಾರ ಸಂಜೆಯವೇಳೆ ಬೇಸ್ ಮಹಡಿಯ ಮೇಲೆ ಬೇಸ್ ಸದಸ್ಯರು ಪೂಜೆಗಾಗಿ ಎಲ್ಲವನ್ನೂ ಅಣಿಗೊಳಿಸಿದ್ದರು. ಮಾತೆ ಸರಸ್ವತಿಯ ಚಿತ್ರಪಟಕ್ಕೆ ಹೂವಿನಿಂದ ಅಲಂಕರಿಸಲಾಗಿತ್ತು. ರಂಗೋಲಿಯನ್ನು ಬಿಡಿಸಿದ್ದರು. ದೀಪಗಳು ಬೆಳಗುತ್ತಿದ್ದವು. ಸಂಜೆ 6:30ರವೇಳೆಗೆ ಪೂಜೆ ಆರಂಭವಾಯಿತು. ಪೂಜಾ ಕೈಂಕರ್ಯಕ್ಕೆ ಆಗಮಿಸಿದ್ದ ಗುರುಗಳು ನೆರೆದಿದ್ದ ಎಲ್ಲ ಸದಸ್ಯರಿಂದ ಮಂತ್ರಪುಷ್ಪಗಳನ್ನು ಪಠಿಸಿ ಮನೋಕೋರಿಕೆ ಸಲ್ಲಿಸುವಂತೆ ಸಲಹಿದರು. ನಂತರ ಎಲ್ಲರಿಗೂ ಭೋಜನದ ವ್ಯವಸ್ಥೆಯಾಗಿತ್ತು. ಈ ಬಾರಿಯೂ ಬೇಸ್ನ ಎಲ್ಲ ಶಾಖಾ ಕಛೇರಿಗಳಲ್ಲೂ ಹಬ್ಬದ ಆಚರಣೆ ಮತ್ತು ಭೋಜನದ ವ್ಯವಸ್ಥೆಯಾಗಿತ್ತು.

ಭೋಜನಾನಂತರ ಬೇಸ್ ಸದಸ್ಯರ ಎರಡು ತಂಡಗಳು ವಿವಿಧ ಮಾರ್ಗಗಳಲ್ಲಿ ಪ್ರವಾಸಕ್ಕಾಗಿ ಹೊರಟರು. ಎಲ್ಲವೂ ಚೆನ್ನಾಗಿತ್ತಾದರೂ ಶಾರದಾಪೂಜೆಯ ಅಣಿ ಮಾಡುವಿಕೆಯಲ್ಲಿ ಅಲ್ಪಸ್ವಲ್ಪ ಲೋಪ ಕಾಣುತ್ತಿತ್ತು. ಸದಸ್ಯರು ತಮ್ಮನ್ನು ತಾವು ಪೂಜಾ ಕೈಂಕರ್ಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದರಲ್ಲಿ ಹಿಂಜರಿಯುತ್ತಿದ್ದು ವಿಷಾದನೀಯ.      
-ಬೇ.ಸು.ಮಿ               

No comments:

Post a Comment