Sunday, 27 November 2011

ಪ್ರಥಮ ಬಹುಮಾನಿತ ಲೇಖನ

: ಉದ್ಯೋಗಸ್ಥ ಪುರುಷ :
ಮಕ್ಕಳ ಲಾಲನೆ ಪಾಲನೆ ಪೋಷಣೆಯಲ್ಲಿನ ಪಾತ್ರ

ಯಾವುದೇ ಕುಟುಂಬದಲ್ಲಿ ಮಕ್ಕಳ ಪಾಲನೆ ಪೋಷಣೆಯ ಮಹತ್ತರವಾದ ಜವಾಬ್ದಾರಿ ಆ ಮಕ್ಕಳ ಪೋಷಕರದ್ದು. ಪೋಷಕರು ಎಂದೊಡನೆ ತಂದೆ ತಾಯಿ ಇಬ್ಬರೂ ಒಳಗೊಂಡಿರುತ್ತಾರೆ. ಹಿಂದಿನ ಕಾಲದಲ್ಲಾದರೆ, ತಾಯಿಯಾದವಳು ಸಾಮಾನ್ಯವಾಗಿ ಮನೆಯಲ್ಲೇ ಇರುತ್ತಿದ್ದರಿಂದ ಮತ್ತು ಕುಟುಂಬದ ಹಿರಿಯರ ಸಹಾಯದಿಂದ ಚಿಕ್ಕ ಮಕ್ಕಳ ಪಾಲನೆ ಪೋಷಣೆಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿದ್ದಳು. ತಂದೆಯಾದವನು ಬಿಡುವಿನ ವೇಳೆಯಲ್ಲಿ ತನ್ನ ಮಕ್ಕಳ ಯೋಗಕ್ಷೇಮದ ಬಗ್ಗೆ, ಅವರ ಆಟಪಾಠಗಳ ಬಗ್ಗೆ ಹಿತ ಚಿಂತನೆ ಮಾಡುತ್ತಿದ್ದರೆ ಸಾಕಿತ್ತು. ಹಾಗಿದ್ದ ಪಕ್ಷದಲ್ಲೂ ಅಂದಿನ ದಿನಗಳಲ್ಲಿ ತಂದೆಯಾದವನು ತನ್ನ ಮಕ್ಕಳ ಬಗ್ಗೆ ಹೆಚ್ಚಿನ ಮುತುವರ್ಜಿ ಜವಾಬ್ದಾರಿ ತೋರಿಸುತ್ತಿದ್ದನು.


ಇತ್ತೀಚಿನ ದಿನಗಳಲ್ಲಿ ಮಹಿಳೆಯೂ ಸಹ ಸಾಮಾನ್ಯವಾಗಿ ಉದ್ಯೋಗಸ್ಥೆಯಾಗಿರುವುದರಿಂದ ಮತ್ತು ವಿಭಕ್ತ ಕುಟುಂಬಗಳೇ ಹೆಚ್ಚಾಗಿರುವುದರಿಂದ ಮಕ್ಕಳ ಆರೋಗ್ಯ, ಬೆಳವಣಿಗೆ, ವಿದ್ಯಾಭ್ಯಾಸ ಲಾಲನೆ ಪಾಲನೆಗಳಲ್ಲಿ ಉದ್ಯೋಗಸ್ಥ ತಂದೆಯಾದವನು ಈ ಎಲ್ಲಾ ಜವಾಬ್ದಾರಿಗಳನ್ನು ಹೆಂಡತಿಯೊಬ್ಬಳಿಗೇ ಬಿಡದೆ ಬೇಜವಾಬ್ದಾರಿಯಾಗಿ ನಡೆಯದೆ, ಮಕ್ಕಳ ಎಲ್ಲಾ ವಿಚಾರಗಳಲ್ಲಿ ಅತ್ಯಂತ ಸಮರ್ಪಕವಾಗಿ ಕಾರ್ಯಗಳನ್ನು ನಿರ್ವಹಿಸಬೇಕು.

ಪುಟ್ಟ ಮಗುವಿಗೆ ತಾಯಿಯ ಸ್ಪರ್ಶ ಬೆಚ್ಚನೆಯ ಅಪ್ಪುಗೆ ಎಷ್ಟು ಹಿತಕರ ಮತ್ತು ಮುಖ್ಯವಾದದ್ದೋ, ಅದೇ ರೀತಿ ಆ ಮಗುವಿಗೆ ತಂದೆಯ ವಾತ್ಸಲ್ಯ ಪ್ರೀತಿಯ ಅಪ್ಪುಗೆ ಎಲ್ಲವೂ ಬೇಕು.

ಅತೀ ಚಿಕ್ಕ ವಯಸ್ಸಿನಿಂದಲೇ ಮಕ್ಕಳಿಗೆ ತಂದೆ ತಾಯಿ ಇವರಿಬ್ಬರ ಪ್ರೀತಿ ಆರೈಕೆಗಳು ಬೇಕಾಗಿರುವುದರಿಂದ, ಉದ್ಯೋಗಸ್ಥ ಪುರುಷನಾದವನು ಯಾವುದೇ ರೀತಿಯ ಬೇಜವಾಬ್ದಾರಿಯನ್ನು ತೋರಿಸದೆ, ತನ್ನ ಮಕ್ಕಳ ಪಾಲನೆ ಪೋಷಣೆಯ ಕಡೆಗೆ ಹೆಚ್ಚಿನ ಗಮನವನ್ನು ಕೊಡಬೇಕು.

ತಂದೆಯಾದವನು ಯಾವುದೇ ಉದ್ಯೋಗದಲ್ಲಿರಲಿ ಮಕ್ಕಳ ಯೋಗಕ್ಷೇಮವೇ ತನ್ನ ಮೊದಲ ಆದ್ಯತೆ ಎಂದು ತಿಳಿದಿರಬೇಕು. ಮಕ್ಕಳು ಅನಾರೋಗ್ಯದಿಂದ ಬಳಲುತ್ತಿದ್ದರೆ, ಕೆಲಸ ಕಾರ್ಯವನ್ನು ಸ್ವಲ್ಪ ಬದಿಗೊತ್ತಿ ತನ್ನ ಹೆಂಡತಿಗೆ ನೆರವಾಗಬೇಕಾಗುತ್ತದೆ.
ಪ್ರತಿದಿನ ಪ್ರತಿನಿತ್ಯ ಮಕ್ಕಳೊಂದಿಗೆ ತಂದೆಯ ಒಡನಾಟ ಇರಲೇಬೇಕು. ಸಮಯವಿದ್ದಾಗ ಪುಟ್ಟ ಮಗುವಿಗೆ ತಿನಿಸು ತಿನಿಸುವುದು, ಸ್ನಾನ ಮಾಡಿಸುವುದು, ಅದನ್ನು ಎತ್ತಿ ಮುದ್ದಿಸುವುದು. ಅದು ಪುಟ್ಟ ಹೆಜ್ಜೆ ಹಾಕುವಾಗ ಅದರೊಂದಿಗೆ ಕೈ ಹಿಡಿದು ನಡೆಸುವುದು ಇದೆಲ್ಲಾ ಬರೀ ತಾಯಿ ಮಾತ್ರ ಅಲ್ಲ, ತಂದೆಯಾದವನೂ ಮಾಡಬೇಕಾದ್ದೇ.

ತಮ್ಮ ಬದುಕಿನ ಜಂಜಾಟದಲ್ಲೇ ಮುಳುಗಿ ಹೋಗದೆ ಮಕ್ಕಳ ಮನಸ್ಸಿಗೆ ಹತ್ತಿರವಾಗಿ ಮುಕ್ತ ವಾತಾವರಣದಲ್ಲಿ ಅವರನ್ನು ಬೆಳೆಸಬೇಕು.

ಹೆಚ್ಚಿನ ಸಂಪಾದನೆ ಮಾಡಿ ಮನೆಗೆ ಬೇಕಾದ ಸಿರಿತನದ ಸುಖ ಸೌಕರ್ಯಗಳನ್ನು ಒದಗಿಸುವುದು ಮಾತ್ರ ಒಬ್ಬ ಉದ್ಯೋಗಸ್ಥ ಪುರುಷನ ನಿರ್ವಹಣೆಯಲ್ಲ. ಅದಕ್ಕಿಂತಲೂ ಹೆಚ್ಚಿನ ಹೊಣೆಗಾರಿಕೆಯನ್ನು ತೆಗೆದುಕೊಳ್ಳಬೇಕು. ಮಕ್ಕಳೊಂದಿಗೆ ಬೆರೆತು, ಅವರ ಮನಸ್ಸನ್ನರಿತು ಅವರ ಕಷ್ಟ ಸುಖಗಳಲ್ಲಿ ತಾನೂ ಭಾಗಿಯಾಗುವುದು ಮಹತ್ತರವಾದ ವಿಚಾರ.

ಎಷ್ಟೋ ಜನ ಉದ್ಯೋಗಸ್ಥ ಪುರುಷರಿಗೆ ತಮ್ಮ ಮಕ್ಕಳು ಯಾವ ಶಾಲೆಯಲ್ಲಿ ಓದುತ್ತಾರೆ, ಎಷ್ಟನೇ ದಜರ್ೆಯಲ್ಲಿ ಓದುತ್ತಾರೆ ಎನ್ನುವುದೇ ತಿಳಿದಿರುವುದಿಲ್ಲ. ಆ ಮಕ್ಕಳು ಹೇಗೆ ಓದುತ್ತಾರೆ, ಶಾಲೆಯಲ್ಲಿ ಅವರ ನಡವಳಿಕೆಯೇನು ಇದೆಲ್ಲಾ ಗೊತ್ತಿರುವುದೇ ಇಲ್ಲ. ತಾಯಿಯೊಬ್ಬಳೇ ಎಷ್ಟೆಲ್ಲಾ ನಿರ್ವಹಿಸಲು ಸಾಧ್ಯ? ತಂದೆಯಾದವನು ಇದನ್ನೆಲ್ಲಾ ಹೆಚ್ಚು ಮುತುವಜರ್ಿಯಿಂದ ಗಮನಿಸಬೇಕು.

ಪ್ರತಿನಿತ್ಯ ಮಕ್ಕಳು ಶಾಲೆಯಿಂದ ಬಂದ ನಂತರ ಸ್ವಲ್ಪ ಹೊತ್ತಾದರೂ ಅವರ ಪಾಠಗಳ ಕಡೆಗೆ, ಓದು ಬರವಣಿಗೆಯ ಕಡೆ ಗಮನ ಕೊಡಬೇಕು. ಕಡೇ ಪಕ್ಷ ವಾರಕ್ಕೊಮ್ಮೆಯಾದರೂ ಅವರ ಓದಿನ ಬಗ್ಗೆ ಇತರ ವಿಚಾರಗಳ ಬಗ್ಗೆ ತಂದೆಯಾದವನು ಆಸಕ್ತಿ ತೋರಿಸುತ್ತಿರಬೇಕು.

ಮಕ್ಕಳು ಮಾನಸಿಕವಾಗಿ ಆರೋಗ್ಯವಾಗಿರಬೇಕೆಂದರೆ ಇಂದಿನ ಉದ್ಯೋಗಸ್ಥ ಪುರುಷ ತನ್ನ ಮಕ್ಕಳ ಬಗ್ಗೆ ಅತ್ಯಂತ ಕಾಳಜಿ ವಹಿಸಿ ಆ ಮಕ್ಕಳ ಆಸಕ್ತಿಗಳೇನು? ಅವರ ಬೇಡಿಕೆಗಳೇನು? ಅವರ ನಡೆನುಡಿಗಳೇನು? ಇವೆಲ್ಲವನ್ನು ತಿಳಿದುಕೊಳ್ಳಬೇಕಾಗುತ್ತದೆ.

ಹದವಾದ ಮಣ್ಣಿನಲ್ಲಿ ಒಳ್ಳೆಯ ಬೀಜ ಬಿತ್ತಿ, ಒಳ್ಳೆಯ ವಾತಾವರಣದಲ್ಲಿ, ಅದಕ್ಕೆ ತಕ್ಕ ಗೊಬ್ಬರ ನೀರು ಹಾಕಿ ಸಸಿಗಳನ್ನು ಬೆಳೆಸುವಂತೆ ಒಬ್ಬ ಉದ್ಯೋಗಸ್ಥ ತಂದೆಯೂ ಸಹ ತನ್ನ ಮಕ್ಕಳಿಗೆ ಉಲ್ಲಾಸಕರವಾದ ವಾತಾವರಣದಲ್ಲಿ ಪ್ರೀತಿಯೆಂಬ ನೀರೆರೆದು ಜವಾಬ್ದಾರಿಯೆಂಬ ಗೊಬ್ಬರ ಹಾಕಿ ಅತ್ಯಂತ ಮುತುವಜರ್ಿಯಿಂದ ಬೆಳೆಸಬೇಕು.

ರಜೆಯ ದಿನಗಳಲ್ಲಿ ಮಕ್ಕಳೊಡನೆ ಸುತ್ತಾಡುವುದು, ಮಕ್ಕಳನ್ನು ಒಳ್ಳೆಯ ಸ್ಥಳಗಳಿಗೆ ಕರೆದುಕೊಂಡು ಹೋಗುವುದು. ಅವರೊಡನೆ ಊಟ, ಆಟ, ಪಾಠ ಇದೆಲ್ಲಾ ಎಷ್ಟೊಂದು ಸುಂದರ ಕ್ಷಣಗಳು. ಇದರಿಂದ ಮಕ್ಕಳು ಮಾನಸಿಕವಾಗಿ, ಬೌದ್ಧಿಕವಾಗಿ ದೈಹಿಕವಾಗಿ ಆರೋಗ್ಯವಂತರಾಗಿ ಬೆಳೆಯುತ್ತಾರೆ.

ಸಾಮಾನ್ಯವಾಗಿ ಎಲ್ಲಾ ಕುಟುಂಬದಲ್ಲೂ ತಾಯಿಯಾದವಳು ಶಕ್ತಿಮೀರಿ ಮಕ್ಕಳನ್ನು ಸಾಕಿ ಸಲಹುತ್ತಾಳೆ. ಇದರೊಂದಿಗೆ ಒಬ್ಬ ಉದ್ಯೋಗಸ್ಥ ಪುರುಷನೂ ತಂದೆಯಾಗಿ ತನ್ನ ಪಾತ್ರವನ್ನು ಸರಿಯಾಗಿ ನಿರ್ವಹಿಸಿದರೆ, ಬದುಕೆಷ್ಟು ಸುಂದರ!

ಎಂದಿಗೂ ಯಾವ ಕಾರಣಕ್ಕೂ ಒಬ್ಬ ಉದ್ಯೋಗಸ್ಥ ಪುರುಷ ತನ್ನ ಜೀವನದಲ್ಲಿ ಪಲಾಯನವಾದಿಯಾಗದೆ, ಹೆಂಡತಿ ಉದ್ಯೋಗಸ್ಥೆ ಆಗಿರಲಿ ಅಥವಾ ಆಗಿಲ್ಲದಿರಲಿ, ಅವಳೊಡನೆ ತಾನೂ ಸಹ ಮಕ್ಕಳ ಜವಾಬ್ದಾರಿಯನ್ನು ನಿರ್ವಹಿಸಲೇ ಬೇಕು. ಆಗಲೇ ಮಕ್ಕಳು ಸತ್ಪ್ರಜೆಗಳಾಗಲು ಸಾಧ್ಯ.

- ಮಾಲಾ ನಾಗರಾಜ್


No comments:

Post a Comment