Sunday, 27 November 2011

ಯಾರ ಮೆಚ್ಚಿಸಲೀ . . . . .!!?. . . !!!



ಹೀಗೆ ಒಮ್ಮೆ ಸೂರ್ಯ, ಭೂಮಿ ಮತ್ತು ಮಳೆರಾಯ ಒಟ್ಟಿಗೆ ಭೇಟಿಯಾದರಂತೆ. ಎಲ್ಲರದ್ದು ಉಭಯಕುಶಲೋಪರಿಯೂ ಆಯಿತು. ನಂತರ ತಂತಮ್ಮ ಭಾವನೆಗಳನ್ನು ತಂತಮ್ಮ ದುಗುಡಗಳನ್ನು ಹಂಚಿಕೊಳ್ಳತೊಡಗಿದರು. ಸಕಲಕೋಟಿ ಜೀವರಾಶಿಗಳಿಗೆ, ಸುತ್ತೇಳು ಲೋಕಗಳಿಗೆ ಬೆಳಕ ನೀಡುವ ಸೂರ್ಯ ತನ್ನ ಮನದ ನೋವನ್ನು ಹೇಳತೊಡಗಿದ:-


ಮಾತೆ ಧರಿತ್ರಿ, ಗೆಳೆಯ ವರುಣ,
ನಿಮಗೆ ತಿಳಿದಿರುವಂತೆ ವಿವಿಧಲೋಕಗಳಿಗೆ, ಸಕಲ ಜೀವರಾಶಿಗಳಿಗೆ ಬೆಳಕ ನೀಡುವುದಕ್ಕೆ ನಿಯಾಮಕನಾದವನು ನಾನು. ನನ್ನ ಕಾಯಕವನ್ನು ಬಿಡುವಿಲ್ಲದೆ ಮಾಡುತ್ತೇನೆ. ಕರ್ತವ್ಯ ನಿರ್ವಹಣೆ ಮಾಡಿದರೆ, ಸೂರ್ಯನಂತೆ ಮಾಡಬೇಕು ಎಂದು ಉಲ್ಲೇಖಕ್ಕೆ ಪಾತ್ರನಾದವನು.  ಇದಕ್ಕಾಗಿ ನನ್ನ ಸನ್ಮಿತ್ರ ಚಂದ್ರನೂ ನನ್ನ ಅನುಪಸ್ಥಿತಿಯಲ್ಲಿ ಬೆಳಕ ನೀಡಿ ಸಹಾಯಮಾಡುತ್ತಿದ್ದಾನೆ. ಪ್ರತೀ ಲೋಕದಲ್ಲೂ ಒಬ್ಬರು ಹೀಗೆ ನನ್ನ ಶರೀರದಿಂದ ತೃಣಮೂಲದಷ್ಟು ಶಕ್ತಿಯನ್ನು ಪಡೆದವರೆಲ್ಲರೂ ತಮ್ಮ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಅವರು ತಂಪು ಬೆಳಕಿನ ಕಿರು ನಗೆ ಬೀರಿ ಎಲ್ಲರಿಗೂ ಪ್ರೀತಿ ಪಾತ್ರರಾಗಿದ್ದಾರೆ.  ಆದರೆ ನನ್ನ ಕಂಡರೆ ಹಲವರಿಗೆ ಅಷ್ಟಕ್ಕಷ್ಟೇ. ನನ್ನ ಬೆಳಕಿನ ಶಕ್ತಿಯಿಂದ ಉತ್ತಮ ಲಾಭ ಪಡೆದರೂ ಅದರ ಅರಿವೇ ಇಲ್ಲ. ನನ್ನ ಸೌಂದರ್ಯ, ತಂಪಿನ ಅರಿವು ಹೆಚ್ಚಿನವರಿಗೆ ತಿಳಿದೇ ಇಲ್ಲ. ಪ್ರತಿದಿನ ಬೆಳಿಗ್ಗೆ ನಾ ಮೂಡುವ ವೇಳೆಗೆ ಏಳುವ ಸಂಪ್ರದಾಯ ಮರೆಯಾಗುತ್ತಿದೆ. ಕೆಲವರು ಏಳುವ ವೇಳೆಗೆ ನನ್ನ ಸೌಂದರ್ಯ ಕಾಣದಾಗಿ ನನ್ನ ಶಾಖದ ಪರಿಣಾಮ ಪ್ರಾರಂಭವಾಗಿರುತ್ತದೆ. ಅಲ್ಲದೆ ಕೆಲವು ಪ್ರದೇಶಗಳಲ್ಲಿ ನಾನು ಕಾಣಲು ಸಾಧ್ಯವೇ ಇಲ್ಲ ಕಾರಣ ಎತ್ತರೆತ್ತರ ಇರುವ ಬಹುಮಹಡಿ ಕಟ್ಟಡಗಳು. ಆದರೆ ಮತ್ತೆ ಕೆಲವರು ನನಗಾಗಿ ಬೆಳಗ್ಗೆಯೇ ಕಾದು ಕುಳಿತು ಅಘ್ರ್ಯ ಪ್ರದಾನಿಸುತ್ತಾರೆ. ಮತ್ತೆ ಕೆಲವು ಒಕ್ಕಲು ಹೂಡುವ ಜನ 'ಸ್ವಾಮಿ ಮೂಡ್ದ' ಅಂತಾ ಕೈಮುಗಿದು ತಮ್ಮ ಕೆಲಸ ಆರಂಭಿಸುತ್ತಾರೆ.  ಅವರಿಗೆ ನನ್ನ ನಿಜ ಸೌಂದರ್ಯ, ಶಕ್ತಿಯ ಅರಿವು ಸಹಜವಾಗಿಯೇ ಇರುತ್ತದೆ.  ಅದೇನೇ ಆದರೂ ಸಮಯ ಕಳೆಯುತ್ತಾ ಮಧ್ಯಾನ್ಹದ ವೇಳೆಗೆ ಎಲ್ಲರೂ ಶಾಪ ಹಾಕಲು ಪ್ರಾರಂಭಿಸುತ್ತಾರೆ. ಥತ್ ಏನ್ ಬಿಸ್ಲೋ, ಈ ಸೂರ್ಯ ಮೂರನೇ ಕಣ್ ಬಿಟ್ಟಿದಾನೆ ಅನ್ಸುತ್ತೆ; ಸಾಕಾಗ್ ಹೋಗಿದೆ ಏನ್ ಸೆಖೆನೋ ತಡ್ಯೋಕಾಗಲ್ಲ ಎನ್ನುತ್ತಾ ಎಲ್ಲರೂ ಅವರವರದೇ ಧಾಟಿಯಲ್ಲಿ ಶಪಿಸುತ್ತಿರುತ್ತಾರೆ. ಹಾಗೆಯೇ ಸಂಜೆಯಾಗುತ್ತಿದ್ದಂತೆ ನನ್ನ ನೋಡಲು ಸಮುದ್ರ ಕಿನಾರೆಗೆ ಬರುತ್ತಾರೆ. 'ಎಷ್ಟು ಸುಂದರವಾಗಿದ್ದಾನೆ. ಮಧ್ಯಾನ್ಹ ಯಾಕ್ ಅಷ್ಟ್ ಬಿಸ್ಲು ಕೊಡ್ತಾನೋ ಅಂತೆಲ್ಲಾ ಹೇಳ್ತಾರೆ. ಎಲ್ಲರಿಗೂ ಬೆಳಿಗ್ಗೆ ಮತ್ತೆ ಸಂಜೆ ಇಷ್ಟವಾಗುತ್ತೇನೆ. ಒಂದೆರಡು ಘಳಿಗೆ ಹೊರತು ಪಡಿಸಿದರೆ ನಿತ್ಯವೂ ನನಗೆ ಬೈಗುಳ ತಪ್ಪಿದ್ದಲ್ಲ.
     ನಾನು ನಿತ್ಯವೂ ಮೂರು ಮಜಲುಗಳನ್ನು ಕಳೆಯುತ್ತೇನೆ. ಬಾಲ್ಯ, ಯೌವನ ಮತ್ತು ವೃದ್ಧಾಪ್ಯವೆಂಬ ಮೂರು ಹಂತಗಳಲ್ಲಿ ನಿತ್ಯವೂ ಜೀವನದ ಸಾರವನ್ನು ತಿಳಿಸುತ್ತಿದ್ದೇನೆ. ಅಂದರೆ ನನ್ನ ಬಾಲ್ಯ ಬೆಳಿಗ್ಗೆಯಾದರೆ, ಯೌವನ ಮಧ್ಯಾನ್ಹ ಮತ್ತು ವೃದ್ಧಾಪ್ಯ ಸಂಜೆಯಾಗಿರುತ್ತದೆ. ಅದರ ಅರ್ಥ ಬಾಲ್ಯದಲ್ಲಿ ಮುಗ್ಧತೆಯೂ ವೃದ್ಧಾಪ್ಯದಲ್ಲಿ ಮುಕ್ತತೆಯೂ ಇರಬೇಕು; ಯೌವನದಲ್ಲಿ ಸಾಧ್ಯವಾದಷ್ಟೂ ಜವಾಬ್ದಾರಿಯುತವಾಗಿ ದುಡಿದು ಅನುಭಾವಿಯಾಗುತ್ತಾ, ಅಹಂಕಾರವನ್ನು ತೊರೆಯುತ್ತಾ ವೃದ್ಧಾಪ್ಯದಲ್ಲಿ ಎಲ್ಲವನ್ನೂ ಜಗನ್ನಿಯಾಮಕನಲ್ಲಿ ಅಪರ್ಿಸಿ, ಜೀವನದ ಅನುಭವವನ್ನು ಮೆಲ್ಲುತ್ತಾ ನಾಲ್ವರಲ್ಲಿ ಹಂಚಿಕೊಳ್ಳುತ್ತಾ ಆನಂದವನ್ನು ಸವಿಯಬೇಕೆನ್ನುವುದೇ ನಾನು ಪ್ರಚುರಪಡಿಸುತ್ತಿರುವ ನಿತ್ಯಬೋಧೆ. ಆದರೆ ಯಾರೊಬ್ಬರೂ ಇದನ್ನು ಅರ್ಥೈಸುವ ಗೋಜಿಗೆ ಹೋಗುತ್ತಿಲ್ಲ ಎನಿಸುತ್ತದೆ. ತಮ್ಮದೇ ಆದ ವೈಜ್ಞಾನಿಕ, ಸಾಂದರ್ಭಿಕ ಕಾರಣಗಳನ್ನು ಕೊಡುತ್ತಿದ್ದಾರೆ. 
    ಮುಂಚೆ ಮಾನವಲೋಕಕ್ಕೆ ನನ್ನ ಶಾಖದ ಪ್ರಖರತೆಯು ಇಷ್ಟಿರಲಿಲ್ಲ. ಅದಕ್ಕೆ ಕಾರಣವೂ ಇದೆ. ಈ ಭೂಲೋಕದ ನಿಮರ್ಾಣ ಸಂದರ್ಭದಲ್ಲಿ ನನ್ನ ತೇಜೋ ಶಕ್ತಿಯ ಪ್ರಭೆ ತಡೆಯಲು ಸಾಧ್ಯವಾಗದೆಂದು ಸೃಷ್ಟಿಯ ಹಂತದಲ್ಲೇ ಪಾರದರ್ಶಕ ಪೊರೆಯೊಂದು ಅನಾವರಣಗೊಂಡು ರಕ್ಷಾ ಕವಚದಂತಿತ್ತು. ಆದರೆ ವಿ-ಜ್ಞಾನದ ಹೆಸರಿನಲ್ಲಿ ಹೊರಬರುತ್ತಿರುವ ಕೊಡುಗೆಗಳೇ ಮುಳುವಾಗುತ್ತಿವೆ. ಈ ರಕ್ಷಣಾ ಪದರದಲ್ಲಿ ರಂಧ್ರಗಳು ಕಾಣಿಸತೊಡಗಿವೆ. ಕ್ಷುದ್ರಶಕ್ತಿಗಳಂತೆಯೇ ಇರುವ ರಾಸಾಯನಿಕಗಳು ಇದನ್ನು ಹಾಳಗೆಡುವುತ್ತಿವೆ. ಹೀಗಿದ್ದರೂ ಕೊನೆಗೆ ಪರಮಾತ್ಮನಲ್ಲಿ ನನ್ನನ್ನು ಶಪಿಸುತ್ತಾ ಕಣ್ಣೀರೆರೆಯುತ್ತಾ ಬದುಕು ಸಾಗಿಸುತ್ತಿದ್ದಾರೆ. ನಾನು ನನ್ನ ಜವಾಬ್ದಾರಿಯನ್ನು ಸರಿಯಾಗಿ  ನಿರ್ವಹಿಸಿಲ್ಲ ಎಂದು ಜಗನ್ನಿಯಾಮಕನು ನನ್ನನ್ನೂ ನಯವಾಗಿ ಬುದ್ಧಿವಾದ ಹೇಳುತ್ತಾನೆ. ಇತ್ತ ಸೃಷ್ಟಿಕರ್ತನ ಹಿತವಚನವನ್ನೂ ಕೇಳಬೇಕು;  ಉಪಕೃತ ಮಾನವರಿಂದಲೂ ಬೈಗುಳ. ಒಮ್ಮೊಮ್ಮೆ ಬೇಸರವಾಗುತ್ತದೆ. ಎಲ್ಲರನ್ನು ಒಟ್ಟಿಗೆ ಸುಟ್ಟುಬಿಡಲೇ ಎನಿಸುತ್ತದೆ.  ಆದರೆ ಅದು ನಮ್ಮ ಮನಸ್ಸಿಗೆ ವಿರುದ್ಧವಾದದ್ದು. ಎಲ್ಲರಿಗೂ ಒಳಿತಾಗಲಿ ಎಂಬುದೇ ನಮ್ಮೆಲ್ಲರ ಭಾವ. ಆದರೆ ನಾ ಇವರ ಹೇಗೆ ಮೆಚ್ಚಿಸಲಿ. . . .!?

     ಇದನ್ನು ಕೇಳುತ್ತಿದ್ದ ಮಳೆರಾಯ ತನ್ನ ಮಾತನಾರಂಭಿಸಿದ. ಹೌದು ಗೆಳೆಯ ನನ್ನ ಪರಿಸ್ಥಿತಿಯೂ ಕೂಡ ಭಿನ್ನವಾಗಿಲ್ಲ. ಹಿಂದಿನ ದಿನಗಳಲ್ಲಿ ನಾನು ಧರೆಗೆ ಇಳಿಯಲಾರಂಭಿಸಿದರೆ ಹಲವು ದಿನಗಳ ಕಾಲ ಹಿಂದಿರುಗುತ್ತಲೇ ಇರಲಿಲ್ಲ. ಗ್ರೀಷ್ಮ ಹಾಗೂ ವರ್ಷ ಋತುಗಳ ನಾಲ್ಕು ತಿಂಗಳುಗಳು ನನಗೆಂದೇ ಮೀಸಲಾಗಿದ್ದವು. ಈ ಸಮಯದಲ್ಲಿ ಯಾರೊಬ್ಬರೂ ತಮ್ಮ ಸ್ಥಳಗಳನ್ನು ಬಿಟ್ಟು ಹೋಗುತ್ತಿರಲಿಲ್ಲ. ವರ್ಷಪೂರ್ತಿ ಬೇಕಾಗುವ ಆಹಾರ ಪದಾರ್ಥಗಳನ್ನು ಬೆಳೆಯಲು ಸಜ್ಜಾಗುತ್ತಿದ್ದರು. ಈ ಕೃಷಿಕರಿಗೆ, ಮತ್ತಿತರರಿಗೆ ತೊಂದರೆಯಾಗಬಾರದೆಂದು ಯತಿಗಳು, ಸನ್ಯಾಸಿಗಳೂ ಕೂಡ ಪ್ರವಾಸ ಮಾಡದೆ, ಒಂದೆಡೆಯಲ್ಲೇ ಇದ್ದು ಚಾತುರ್ಮಾಸ್ಯ ವ್ರತ ಮಾಡುತ್ತಿದ್ದರು.  ನದಿ ಕೆರೆ, ಕಾಲುವೆ, ಬಾವಿ ತುಂಬುತ್ತಿದ್ದವು. ವರ್ಷಪೂರ್ತಿ ನೀರಿಗೆ ತೊಂದರೆಯಾಗದಂತೆ ಎಲ್ಲವನ್ನೂ ತುಂಬಲು ಪ್ರಯತ್ನಿಸುತ್ತಿದ್ದೆ. ಭೂದೇವಿಯ ದಣಿವ ತಣಿಸಿ ಪ್ರಕೃತಿ ದೇವಿಯ ಸೌಂದರ್ಯಕ್ಕೆ ಕಾರಣನಾಗುತ್ತಿದ್ದೆ. ನನ್ನ ಪಡೆಯಲ್ಲಿ 27 ಮಂದಿ ಇದ್ದಾರೆ.  ಮಿತ್ರರೆಲ್ಲರೂ ನಿಗದಿತ ಸಮಯಾನುಸಾರ ಧರೆಗೆ ತಂಪೆರೆಯುತ್ತಿದ್ದರು. ಇಡೀ ವರ್ಷ ಕಾಲಕಾಲಕ್ಕೆ ಸರಿಯಾಗಿ ಮಳೆಸುರಿಸುತ್ತಿದ್ದೆವು. ವರ್ಷಕ್ಕೆ ಮೂರು ಬೆಳೆ ಬೆಳೆಯಲು ಸಹಕಾರಿಗಳಾಗುತ್ತಿದ್ದೆವು. ಈ ಪಶು-ಪಕ್ಷಿ-ಮಾನವರು ಎಲ್ಲರೂ ಸಂತೋಷದಿಂದಿದ್ದರು. 
     ಇಂದು ನಾನು ಬಂದರೂ ಕಷ್ಟ; ಬರದಿದ್ದರೂ ಕಷ್ಟ. ಬೆಳಿಗ್ಗೆ ಬಂದರೆ ಕೆಲವರಿಗೆ ಕಷ್ಟ; ರಾತ್ರಿ ಬಂದರೆ ಮತ್ತೆ ಕೆಲವರಿಗೆ.  ಬೆಳಿಗ್ಗೆ ಬಂದರೆ 'ಅಯ್ಯೋ ಈ ಹಾಳಾದ್ ಮಳೆ ಬೆಳಿಗ್ಗೆ ಬೆಳಿಗ್ಗೇನೆ, ಥು, ಬಿಕೋ ಅಂತಿದೆ ಅಂತಾರೆ. ಮಧ್ಯಾನ್ಹ ಬಂದರೆ ಈ ಮಳೆ ಈಗ್ಲೆ ಬರಬೇಕಿತ್ತೆ. ಊಟಕ್ ಹೋಗೋಕಾಗಲ್ಲ ಅಂತ ಮಾತಾಡ್ತಾರೆ. ಇನ್ನು ಸಂಜೆ ಬಂದೆ ಅಯ್ಯೋ ಮನೆಗೆ ಹೋಗೋ ವೇಳೆ ಏನ್ ತೊಂದ್ರೆ ಕೊಡುತ್ತೋ ಈ ಮಳೆ  ಅಂತಾರೆ.  ಹಾಗೆ ತಾಯಿ ತನ್ನ ಮಗು ಮನೆಗ್ ಸೇರಿದ್ ಮೇಲೆ ಈ ಮಳೆ ಬರಬಾರ್ದಿತ್ತೆ ಅಂತಾಳೆ.  ಇನ್ನು ರಾತ್ರಿ ವೇಳೆ ಬಂದ್ರೆ ಕೆಲವರು 'ಈ ಮಳೆಗೆ ಟೈಮು ಅನ್ನೋದೆ ಇಲ್ಲ.  ಈಗ್ ಶುರುವಾಗಿದೆ ಬೆಳ್ಳಂಬೆಳ್ಗೂ ಲೊಟಲೊಟ ಅಂತ ಬಂದ್ಕೊಂಡಿರುತ್ತೆ'  ಅಂತೆಲ್ಲಾ ಅವರವರ ಅಭಿಮತಕ್ಕೆ ತಕ್ಕಂತೆ ಗುನುಗ್ತಾ ಇರ್ತಾರೆ.  ಹೀಗಿರುವಾಗ ನಾನು ಪ್ರತಿಯೊಬ್ಬರಿಗೂ ಅವರಿಗೆ ಬೇಕಾದ ಜಾಗಕ್ಕೆ ಹೇಗೆ ಮಳೆಸುರಿಸ್ಲಿ ಅಥವಾ ಸುರಿಸ್ದೇ ಇರ್ಲಿ. ಹೀಗಾದ್ರೆ ನದಿ, ಕೆರೆ ಹಳ್ಳ ಕೊಳ್ಳಗಳು ತುಂಬೋದಾದ್ರು ಹೇಗೆ? ಕೊನೆಗೆ ಬೈಗುಳ ನನಗೆ ಬರೋದು. ಹಿಡಿಶಾಪ ಹಾಕ್ತಾರೆ. 
     ನಾನು ಯಾವಾಗ್ ಯಾವಾಗ್ಲೋ ಬರ್ತೀನಂತೆ. ಇದಕ್ಕೆ ದೇವರ ಶಾಪ ಕಾರಣಾನಂತೆ.  ಅದಕ್ಕ ಒಂದ್ ಕತೆ ಬೇರೆ ಕಟ್ಟಿದ್ದಾರೆ ಗೆಳೆಯ. ನಿನಗೆ ತಿಳಿದಿರುವಂತೆ ಜಗನ್ನಿಯಾಮಕನು ಭೂಮಿಯನ್ನು ಸೃಷ್ಟಿಸಿ ಅದಕ್ಕೆ ತನ್ನ ಪತ್ನಿಯ ಛಾಯಾರೂಪವನ್ನೇ ಮಾತೃಸ್ವರೂಪಿಣಿಯನ್ನಾಗಿಸಿದ. ಶ್ರೀದೇವಿಯು ಭೂಮಿತಾಯಿಯಾಗಿ, ಧರಿತ್ರಿಯಾಗಿ, ಧಾರಿಣಿಯಾಗಿ ಭಾರವನ್ನು ತಡೆಯುವಳೆಂಬ ನಂಬಿಕೆಯಿತ್ತು. ಹಾಗಾಗಿ ಮಹಾತಾಯಿಯ ರೂಪವನ್ನು ಕಳುಹಿಸಿದ. ಹಾಗಾಗಿ ಶರದೃತುವಿನಲ್ಲಿ ಇಂದಿಗೂ ದೇವಿಯ ಆಗಮನವನ್ನು 10 ದಿನಗಳ ಕಾಲ ಉತ್ಸವವಾಗಿ ನವರಾತ್ರಿ, ದಸರಾ ಎಂದು ಬಗೆ ಬಗೆಯಾಗಿ ಆಚರಿಸುತ್ತಿದ್ದಾರೆ. ಮರ ಗಿಡ ಜೀವಸಂಕುಲ ಎಲ್ಲರೂ ಸಂಭ್ರಮವನ್ನ ಆಚರಿಸುತ್ತಾರೆ. ಮಿತ್ರ, ನಿನಗೆ ತಿಳಿದಿರುವಂತೆ ಈ ಭೂಮಿಯಲ್ಲಿ ಮೊದಲು ಸೃಷ್ಟಿಯಾಗಿದ್ದು ಗಿಡ, ಮರ, ಪ್ರಾಣಿಸಂಕುಲ. ಮಾನವರ ಸೃಷ್ಟಿ ತದನಂತರದಲ್ಲಿ ಆಯಿತು. ಆ ಸಮಯವನ್ನಾಧರಿಸಿ ಈ ಮಾನವರು ಒಂದು ಕತೆ ಕಟ್ಟಿದ್ದಾರೆ.

     ಮಾನವರ ಸೃಷ್ಟಿಗೆ ಮೊದಲು ಈ ಗ್ರಹದಲ್ಲಿ ಮರ ಗಿಡ ಪಕ್ಷಿ ಪ್ರಾಣಿಗಳನ್ನು ಸೃಷ್ಟಿಸಿದ. ಜಗನ್ನಿಯಾಮಕನಿಗೆ ಮತ್ತು ಜಗಜ್ಜನನಿ ಭೂಮಿಗೆ ಬರುವ ಕ್ರಾರ್ಯಕ್ರಮ ಆಯೋಜಿತವಾಯಿತು. ಆಗ ಎಲ್ಲವೂ ಶುಭ್ರವಿರಬೇಕೆಂಬ ಮತ್ತು ಹಬ್ಬವನ್ನು ಆಚರಿಸಬೇಕೆಂಬ ಉದ್ದೇಶದಿಂದ ಪ್ರಾಣಿ ಪಕ್ಷಿಗಳು ಗಿಡ ಮರ ಬಳ್ಳಿಗಳೂ ಕೆಲವು ಜವಾಬ್ದಾರಿಯನ್ನು ವಹಿಸಿಕೊಂಡವು. ನೆಲವನ್ನು ನೀರಿನಿಂದ ಶುದ್ಧೀಕರಿಸಲು ನನ್ನನ್ನು ಕೇಳಿಕೊಂಡಿದ್ದರು. ನಾನು ಸುಸಮಯದಿ ಬರಲಾಗಲಿಲ್ಲವಂತೆ. ಅದಕ್ಕೆ ಕಾರಣ ನಾನು ಆ ದೇವನ ಸೃಷ್ಟಿ ಈರುಳ್ಳಿಯನ್ನು ಪ್ರೀತಿಸುತ್ತಿದ್ದನಂತೆ. ಮರೆತು ಅವಳ ಮೋಹ ಪಾಶದಿ ಸಮುದ್ರದ ಕಿನಾರೆಯಲ್ಲಿ ಮಲಗಿಬಿಟ್ಟಿದ್ದೆನಂತೆ. ವಿಷಯ ತಿಳಿದ ಸಮುದ್ರರಾಜನು ಚೆನ್ನಾಗಿ ಬೈದು ನನ್ನನ್ನು ಕಳಿಸಿದನಂತೆ. ನಾನು ಅಯ್ಯೋ ಮರೆತೆನಲ್ಲ ಅಂತ ಹೋಗಿ ಎಲ್ಲಡೆ ಮಳೆ ಸುರಿಸಿದೆನಂತೆ. ಆದರೆ ಆ ವೇಳೆಗಾಗಲೇ ಐರಾವತನ ಸಹಾಯದಿಂದ ನೀರನ್ನು ಚುಮುಕಿಸಿ, ಇರುವೆ, ಕ್ರಿಮಿಕೀಟಗಳು ರಂಗೋಲಿ ಬಿಡಿಸಿದ್ದವಂತೆ. ಬಾಳೆಕಂಬಗಳು ಸ್ವತಃ ದಾರಿಯುದ್ದಕ್ಕೂ ಅಲಂಕೃತಗೊಂಡಿದ್ದವಂತೆ. ಹೀಗೆ ಒಬ್ಬೊಬ್ಬರು ತಮ್ಮ ಜವಾಬ್ದಾರಿಯಂತೆ ಹೂವು ಹಣ್ಣು ಮಹಾನೈವೇದ್ಯ ಎಲ್ಲವನ್ನೂ ಸಿದ್ಧಗೊಳಿಸಿದರಂತೆ. ನಾನು ತಿಳಿಯದೆ ಮಳೆ ಸುರಿಸಿದ್ದರಿಂದ ಎಲ್ಲವೂ ಸರ್ವನಾಶವಾಯಿತು. ಆಗ ಸಕಲ ಜೀವರಾಶಿಗಳೆಲ್ಲಾ ಸೃಷ್ಟಿಕರ್ತನಲ್ಲಿ ಮೊರೆಹೋದವಂತೆ. ಆಗ ಅತನು ವಿಷಯವನ್ನು ಗ್ರಹಿಸಿ ನನಗೆ ಮತ್ತು ನನ್ನ ಪ್ರಿಯತಮೆ (ಮಾನವರ ದೃಷ್ಟಿಯಲ್ಲಿ) ಈರುಳ್ಳಿಗೆ ಶಾಪವಿಟ್ಟನಂತೆ. 'ಮಳೆರಾಯ ನೀನು ಬಂದರೂ ಬರದಿದ್ದರೂ ಎಲ್ಲರೂ ನಿನ್ನನ್ನು ನಿಂದಿಸುವಂತಾಗಲಿ, ಶಪಿಸುವಂತಾಗಲಿ ಎಂದನಂತೆ. ಈರುಳ್ಳಿಗೆ, ನಿನಗೆ ಮಳೆರಾಯ ಅಂದ್ರ ಇಷ್ಟ ಅಲ್ವ. ನಿನ್ನನ್ನು ಕತ್ತರಿಸುವಾಗ, ಕತ್ತರಿಸುವರ ಕಣ್ಣುಗಳಲ್ಲಿ ನೀರುಬರಲಿ ನಿನ್ನನ್ನು ನಿಂದಿಸುವಂತಾಗಲಿ' ನಿಮ್ಮಿಬ್ಬರಿಗೆ ನೀಡಿರುವ ಶಿಕ್ಷೆ ಎಲ್ಲರಿಗೂ ಮಾರ್ಗದಶರ್ಿಯಾಗಲಿ ಎಂದನಂತೆ. ಅಂದಿನಿಂದ ನನಗೆ ಯಾವಾಗ ಬಂದರೂ ಶಾಪ ನಿಶ್ಚಿತವಂತೆ ಅಂತೆಯೇ ಈರುಳ್ಳಿಗೂ ಕೂಡ. ಈ ಶಾಪ ಶಮನವಾಗುವುದು ಕಲಿಯುಗದ ಅಂತ್ಯದಲ್ಲಂತೆ. ಹೀಗೆ ನನ್ನ ಮೇಲೆ ಹಲವಾರು ಕತೆಗಳನ್ನು ಕಟ್ಟುತ್ತಾರೆ  ಎಂದು ದೈನ್ಯದಿಂದ ನುಡಿದ ಮಳೆರಾಯ.

    ಇದಕ್ಕ್ ಸರಿಯಾಗಿ ತುಪ್ಪ ಸುರ್ಯೋದಕ್ಕೇ ಅಂತ ಕೆಲವರು ಇದ್ದಾರೆ. ಅದೇನೋ ಮೀಡ್ಯಾದೋರಂತೆ. ಟಿವಿನಂತೆ, ಪೇಪರಂತೆ. ಇತ್ತೀಚೆಗೆ ಈ ಟೀವಿನೋರ್ ಹಾವಳಿ ಜಾಸ್ತಿ ಆಗಿದೆ. ಅವರ ಹೇಳೋದ್ ಒಂದೆರಡು ಉದಾಹರಣೆ ಹೇಳ್ತೀನಿ ಮಳೆರಾಯ ಯಾಕೋ ಮುನಿಸಿಕೊಂಡಿದ್ದಾನೆ. ಈ ಜಾಗದಲ್ಲಿ ಕ್ಷಾಮ. ರೈತರ ಸಾವು, ಮಳೆರಾಯನ ಅತಿಯಾದ ಆರ್ಭಟ, ಮನೆ ಧ್ವಂಸ, ಸಾವು, ರಾತ್ರಿಯಿಡಿ ಮಳೆರಾಯ ಜಿಟಿ ಜಿಟಿ ಎನ್ನುತ್ತಾ ಬೇಸರ ತರಿಸುತ್ತಿದ್ದಾನೆ. ಎಂತೆಲ್ಲಾ ಬೆಳಿಗ್ಗೆಯಿಂದ ರಾತ್ರಿವರೆಗೆ ಗಂಟೆಗೆ 18 ಬಾರಿಯಂತೆ ಹೇಳುತ್ತಲೇ ಇರುತ್ತಾರಂತೆ. ಇವರೆಲ್ಲರ ಬಯಕೆಯಂತೆ ಕಾರ್ಯ ನಿರ್ವಹಿಸುವುದು ಹೇಗೆ?  ಪೂರ್ವದಲ್ಲಿ ಕೆಲವು ರಾಕ್ಷಸರಿದ್ದರು ಅವರು ಹೇಳಿದಂತೇ ಕೇಳಬೇಕಿತ್ತು. ಈಗ ಬಹುತೇಕ ಎಲ್ಲರೂ ಅವರಂತೆಯೇ ಆಗಿದ್ದಾರೇನೋ ಎನಿಸುತ್ತದೆ. ಯಾರನ್ನು ಮೆಚ್ಚಿಸುವುದೋ ಯಾರನ್ನು ಬೇಡುವುದೋ, ಯಾರನ್ನು ಕಾಯುವುದೋ ತೋಚುತ್ತಿಲ್ಲ. ನನಗೆ ಯಾವಾಗಲೂ ಒಂದು ಪ್ರಶ್ನೆ ಕಾಡುತ್ತಲೇ ಇರುತ್ತೆ  ನಾ ಇವರ ಹೇಗೆ ಮೆಚ್ಚಿಸಲಿ . . . . .!??
    
      ಇವರಿಬ್ಬರ ಮಾತನ್ನು ಕಂಡ ಜಗನ್ಮಾತೆ ಪ್ರತಿ ಸ್ವರೂಪಿಣಿ ಭೂದೇವಿಯು ಮಕ್ಕಳೆ ನಿಮಗೆ ಬರೀ ನಿಂದನೆಯಾದರೆ ಈ ಹುಲು ಮಾನವರು ಅವರಿಗೆ ಇಷ್ಟಬಂದಂತೆ ನನ್ನನ್ನು ನೋಡಿಕೊಳ್ಳುತ್ತಾರೆ, ಉಗಿಯುತ್ತಾರೆ, ತುಳಿಯುತ್ತಾರೆ, ಹಳ್ಳತೋಡುತ್ತಾರೆ, ಮುಚ್ಚುತ್ತಾರೆ ಹೀಗೆ ಒಂದೇ-ಎರಡೇ ಹೇಳಿಕೊಳ್ಳುವುದಕ್ಕೆ ಏನೇನೋ ಮಾಡುತ್ತಾರೆ.  ತಾವೇ ನಿಮರ್ಾತೃಗಳಂತೆ ನನ್ನನ್ನೇ ಮಾರುತ್ತಾರೆ. ಆದರೆ ಹೆಚ್ಚು ಮಂದಿ ನನ್ನ ಮೇಲೆ ಸದ್ಭಾವನೆಯನ್ನು ಇಟ್ಟುಕೊಂಂಡಿರುವುದು ಹೆಮ್ಮೆ ಎನಿಸುತ್ತದೆ.
       ಜನನೀ ಜನ್ಮಭೂಮಿಶ್ಚ ಸ್ವಗರ್ಾದಪಿ ಗರೀಯಸಿ ಎಂದು ಬಣ್ಣಿಸುತ್ತಾರೆ. ನನಗೆ ಮಾತೃಸ್ಥಾನವನ್ನು ಕೊಟ್ಟು ನಾನು ಸಹನಾಸ್ವರೂಪಿಣಿಯನ್ನಾಗಿಸಿದ್ದಾರೆ. ನನ್ನ ಪತಿದೇವನೂ ಕೂಡ ನನಗೆ ನೀಡಿರುವ ಆಜ್ಞೆಯೂ ಅದೇ. ಎಷ್ಟೇ ಕಷ್ಟಬಂದರೂ ಸಹನೆ ಕಳೆದುಕೊಳ್ಳಬಾರದು. ಕ್ಷಮಾಗುಣವಿರಬೇಕು. ಹಾಗಾಗಿಯೇ ಈ ಭೂಲೋಕದಲ್ಲಿ ಕ್ಷಮೆ ಸಹನೆಗೆ ನನ್ನನ್ನು ಮಾದರಿಯಾಗಿಸಿಕೊಂಡಿದ್ದಾರೆ. ನನ್ನಲ್ಲಿ ಪೈರು-ಪಚ್ಚೆ ಬೆಳೆಯುತ್ತಾರೆ. ಅದಕ್ಕಾಗಿ ವ್ಯವಸಾಯ ಮಾಡುತ್ತಾರೆ. ಆಹಾರಕ್ಕಾಗಿ ನನ್ನನ್ನು ಅವಲಂಬಿಸಿದ್ದಾರೆ. ಬದುಕಿಗಾಗಿ ಗೂಡುಕಟ್ಟಿಕೊಳ್ಳುತ್ತಾರೆ. ವಿಷಾದವೆಂದರೆ ಯಾವುದೂ ತನ್ನದಲ್ಲವೆಂದು ತಿಳಿದಿದ್ದೂ ಗುರುತುಗಳನ್ನು ಮಾಡುತ್ತಾರೆ. ನನ್ನದು, ನಿನ್ನದು ಅಂತೆಲ್ಲಾ ನನಗಾಗಿ ಕಿತ್ತಾಡುತ್ತಾರೆ. ಆಗ ನನಗಾಗುವ ವೇದನೆ ಅಷ್ಟಿಷ್ಟಲ್ಲ. ಜೊತೆಗೆ ತಾವೇ ದುರಾಸೆಯಿಂದ ಹೆಚ್ಚು ಬೆಳೆ ಬೆಳೆಯಲೋಸುಗ ರಾಸಾಯನಿಕಗಳನ್ನು ಬಳಸಿ ಅದರಿಂದ ದುಷ್ಪರಿಣಾಮವಾದಾಗ ಯಾಕೋ ಭೂಮಿತಾಯಿ ಮುನಿಸಿಕೊಂಡಿದ್ದಾಳೆ; ಬೆಳೆದ ಅನ್ನ ವಿಷವಾಗುತ್ತಿದೆ ಎಂದು ನೊಂದುಕೊಳ್ಳುತ್ತಾರೆ. ನನ್ನನ್ನು ಕೊರೆದು ಕೊರೆದು ನನ್ನ ಅಂತರಾಳದಲ್ಲಿ ಸಾರ ಕಳೆದುಕೊಳ್ಳುತ್ತಿದ್ದೇನೆ. ಇವರಿಗೆ ಎಷ್ಟು ಕೊರೆದರೂ ತೃಪ್ತಿಯೇ ಸಿಗುತ್ತಿಲ್ಲ. ಕೆಲವು ವೇಳೆ ನನ್ನ ಆಯತಪ್ಪಿ ನನ್ನ ಅಂತರಾಳದಲ್ಲಿ ಹುದುಗಿರುವ ನೋವು ಜ್ವಾಲೆಯಾಗಿ ಪರಿಣಮಿಸಿ ಜ್ವಾಲಾಮುಖಿಯಾಗುತ್ತಿದೆ. ಕೆಲವೊಮ್ಮೆ ಸ್ಫೋಟಕಗಳ ತುಣುಕುಗಳ ಇದ್ದ ಪರಿಣಾಮವಾಗಿ ನನಗೆ ನಡುಕವುಂಟಾಗಿ ನಡುಗಿದಾಗ ಅದಕ್ಕೆ ಭೂಕಂಪನ ಎನ್ನುತಾರೆ. ಇವುಗಳಿಂದ ಹಲವಾರು ಮಂದಿ ತಮ್ಮ ಜೀವ ಕಳೆದುಕೊಳ್ಳುತ್ತಿದ್ದಾರೆ. ನನ್ನ ಆದರ್ಶಗಳಿಗೆ ವಿರುದ್ಧವಾದ ಈ ವಿಚಾರ ನನ್ನನ್ನು ಆಗಿಂದಾಗ್ಗೆ ಕುಗ್ಗಿಸುತ್ತಿದೆ. ಈ ಮಾನವರು ಕೊರೆದೂ ಕೊರೆದೂ ಎಂದಿಗೆ ನನ್ನ ಸ್ಥಿಮಿತವನ್ನು ಕಳೆದು ಬಿಡುತ್ತಾರೋ ಎನಿಸುತ್ತಿದೆ. ಯಾಕೆಂದರೆ ನನ್ನನ್ನು ಮಧ್ಯಭಾಗಕ್ಕೆ ಸೀಳಿ ಒಳಗೆ ಏನಿದೆ ಎಂದು ನೋಡುವ ಆಸಕ್ತಿ ದಿನೇ ದಿನೇ ಅಧಿಕವಾಗುತ್ತಿದೆ ಈ ಮಾನವರಿಗೆ.  ಇವರು ತಮಗೆ ತಾವೇ ಕಷ್ಟ ಕುಂದು ತಂದುಕೊಳ್ಳುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಏನಾಗುವುದೋ ತಿಳಿಯುವುದೇ ಇಲ್ಲ. 
    ಏನೋ . .  ಒಂದೂ ತೋಚುವುದಿಲ್ಲ. ಹೀಗಾದರೆ ನನ್ನ ಅಳಿವು ಉಳಿವು ಎಲ್ಲವೂ ನಿಗೂಢ. ನಾನು ಯಾರನ್ನು ಮೆಚ್ಚಿಸಬೇಕೆಂಬ ಆಯ್ಕೆಯೇ ಇಲ್ಲ. ನನ್ನ ಒಡೆಯನ ಆಣತಿಯಂತೆ ಎಲ್ಲರನ್ನು ನಾನು ಕ್ಷಮಿಸಲೇ ಬೇಕು ಅಲ್ಲವೇ. . . !? ಆದರೂ ನಾ ಹೇಗೆ ಮೆಚ್ಚಿಸಲಿ. . . !?


     ನಮ್ಮ ಜೀವನ ಸಿಹಿ-ಕಹಿ ಸುಖ-ದುಃಖ ಸಮ್ಮಿಳಿತಗೊಂಡ ಸಮ್ಮಿಶ್ರಣದ ಸಮಾಗಮ. ಡಿವಿಜಿ ಯವರು ಹೇಳುತ್ತಿದ್ದಂತೆ ಒರಟು ಕೆಲಸವೊ ಬದುಕು. ನಮ್ಮ ಬದುಕು ಮತ್ತು ಜಗತ್ತು ನಡೆಯುವುದು ಅನೇಕ ಸಂದರ್ಭಗಳ ಹೊಂದಾಣಿಕೆಯಿಂದ. ವಿಷಯ ಸಾಮರಸ್ಯವಿರದ ಯಾವುದೇ ಕಾರ್ಯಗಳು ಫಲ ನೀಡುವುದಿಲ್ಲ. ಆದರೆ ಇದರೆಡೆಗೆ ನಾವು ಗಮನಕೊಡದೆ ಅಸಮಧಾನಗೊಳ್ಳುತ್ತೇವೆ. ಅಯ್ಯೋ ನನಗೆಷ್ಟು ಕೆಲಸ, ನನ್ನನ್ನು ಬಿಟ್ಟರೆ ಈ ಜವಾಬ್ದಾರಿಯನ್ನು ವಹಿಸುವವರಾರು; ಎಂದು ನಿಟ್ಟುಸಿರು ಬಿಟ್ಟು ನಮ್ಮ ವಿಷಯದಲ್ಲಿ ನಾವೇ ಜಂಬ ಕೊಚ್ಚಿಕೊಳ್ಳುತ್ತೇವೆ. ಜೊತೆಗೆ ಇದೆಲ್ಲವೂ ಆ ದೇವನ ಲೀಲೆ; ಅವನು ಅದೆಷ್ಟು ತೊಂದರೆ ಕೊಡುತ್ತಾನೋ ಕೊಡಲಿ; ನಾನು ಮಾಡುವುದೆಲ್ಲಾ ಅವನಿಚ್ಛೆಯಂತೆಯೇ ಎಂದು ಮಾತು ಮಾತಿಗೂ ಹೇಳುತ್ತಾ ನಮ್ಮ ಇಚ್ಛೆಯನ್ನು ಪೂರ್ಣಗೊಳಿಸಿಕೊಳ್ಳಲು, ಸಾಧಿಸಿಕೊಳ್ಳಲು ಧಾವಂತ ಪಡುತ್ತಾ ಅವನ ನಿರ್ಣಯಕ್ಕೆ ಯಾವುದನ್ನೂ ಬಿಡದೆ ನಮ್ಮ ಹುಷಾರಿನಲ್ಲಿ ನಾವಿರುತ್ತೇವೆ. ನಮ್ಮ-ನಮ್ಮ ಇಚ್ಛೆಯನ್ನು ಪೂರ್ತಿಗೊಳಿಸಿಕೊಳ್ಳಲು ನಾವು ಯಾರಿಗೆ ಬೇಕಾದರೂ ಕೈ-ಕಾಲು ಮುಗಿಯಲು ಸಿದ್ಧರಿರುತ್ತೇವೆ. ಅವರ ಮನಸ್ಸಿಗೆ, ಹಾವ-ಭಾವಕ್ಕೆ ತಕ್ಕಂತೆ ನಡೆದುಕೊಳ್ಳುತ್ತೇವೆ. ಅವರಿಗೆ ಇಷ್ಟವಿರುವ ವಿಷಯಗಳಿಂದಲೇ ಅವರನ್ನು ಮೆಚ್ಚಿಸಲು ಪ್ರಯತ್ನಿಸುತ್ತಿರುತ್ತೇವೆ. ಕಾರ್ಯಾಲಯಗಳಲ್ಲಿ  ಮೇಲಧಿಕಾರಿಯನ್ನು ಮೆಚ್ಚಿಸಲು ನಮ್ಮೊಡನೆ ನಿತ್ಯವೂ ಹೆಚ್ಚು ಹೊತ್ತು ಆತ್ಮೀಯವಾಗಿ ಕೆಲಸಮಾಡುವ ಜೊತೆಗಾರರ ಬಗ್ಗೆಯೇ ಮೇಲಧಿಕಾರಿಗಳಲ್ಲಿ ಇಲ್ಲಸಲ್ಲದ ಆರೋಪಗಳನ್ನು ಮಾಡಿ ನಮ್ಮ ಬೇಳೆ ಬೇಯಿಸಿಕೊಳ್ಳುತ್ತೇವೆ ಅಥವಾ ನಾಲ್ಕಾರು ಜನರು ಮಾಡುವ ಕೆಲಸವನ್ನು ನಾವೇ ಮಾಡುತ್ತಿದ್ದೇವೆ ಎಂದು ಹೇಳಿ ಭೇಷ್ ಎನಿಸಿಕೊಳ್ಳುತ್ತೇವೆ ಅಥವಾ ಬೇರೊಬ್ಬರು ಮಾಡಿದ ಕೆಲಸವನ್ನು ನಾನೇ ಮಾಡಿದೆ ಎಂದು ಹೇಳಿಕೊಳ್ಳುತ್ತಾ ಭೇಷ್ ಎನಿಸಿಕೊಳ್ಳುತ್ತೇವೆ. ಹೊಗಳುಭಟ್ಟರಾಗಿ ಮೇಲಧಿಕಾರಿಯನ್ನು ಮೆಚ್ಚಿಸುತ್ತೇವೆ. ಹೀಗೆ ಕೆಲಸಗಾರ ಮೇಲಧಿಕಾರಿಯನ್ನು, ಮೇಲಧಿಕಾರಿ ನಿರ್ದೇಶಕನನ್ನು, ನಿರ್ದೇಶಕ ಮತ್ತೊಬ್ಬರನ್ನು, ಗಂಡ-ಹೆಂಡತಿಯನ್ನು, ಹೆಂಡತಿ ಗಂಡನನ್ನು, ಮಕ್ಕಳು ಪೋಷಕರನ್ನು, ಪೋಷಕರು-ಮಕ್ಕಳನ್ನು, ಗೆಳೆಯ-ಗೆಳತಿಯರನ್ನು ಹೀಗೆ ಒಬ್ಬರು ಮತ್ತೊಬ್ಬರನ್ನು ನಮ್ಮ ಕೆಲಸಗಳಿಗಾಗಿ ಮೆಚ್ಚಿಸುತ್ತೇವೆ. ಎಲ್ಲವೂ ಸ್ವಾರ್ಥವೇ. ಇದರಲ್ಲಿ ಯಾವುದಾದರೂ ಕುಂದುಂಟಾದಾಗ ದೇವರನ್ನು ಜಪತಪ ವ್ರತಾದಿಗಳಿಂದ ಮೆಚ್ಚಿಸಲು ಬಹಳ ಪ್ರಯತ್ನಿಸುತ್ತೇವೆ. ಹೀಗೆ ನಮ್ಮ ಬದುಕು ಮತ್ತೊಬ್ಬರನ್ನು ಮೆಚ್ಚಿಸುವುದೇ ಆಗಿದೆ. 
      ಇದು ನಮ್ಮ ಮನುಕುಲದ ವಿಚಾರವಾದರೆ ಇನ್ನು ಈ ಜಗತ್ತಿನ ಇತರ ಜೀವಸಂಕುಲಗಳಾದ ಪ್ರಾಣಿ, ಪಶು, ಪಕ್ಷಿ, ಸಸ್ಯಕೋಟಿ ಎಲ್ಲವೂ ಹೊರತಾಗಿಲ್ಲ. ಅವೂ ಮೆಚ್ಚಿಸಲೇ ಬೇಕು ಆದರೆ ಅವು ನಮಗಿಂತ ವಿಭಿನ್ನವಾಗಿವೆ. ವಿಪರ್ಯಾಸವೆಂದರೆ ಎಲ್ಲವೂ ಮನುಷ್ಯನನ್ನು ಮೆಚ್ಚಿಸಲೇ ಬೇಕು. ನಾಯಿ, ಬೆಕ್ಕು ತನ್ನ ಯಜಮಾನನ್ನು ಮೆಚ್ಚಿಸಬೇಕು. ಅವನು ಹೇಳಿದಂತೆ ಕೇಳಬೇಕು. ಹಸು, ಎಮ್ಮೆ, ಕುರಿ ಇತರ ಸಾಧು ಪ್ರಾಣಿಗಳು ತನ್ನ ಯಜಮಾನ ತೋರಿಸಿದ ಕೆಲಸವನ್ನು ಮಾಡಬೇಕು; ಬಯಸಿದಷ್ಟು ಹಾಲು ಕೊಡಬೇಕು. ಅವುಗಳಿಂದ ಪ್ರಯೋಜನ ಮುಗಿದ ನಂತರ ಕಸಾಯಿ ಖಾನೆ ಸೇರಬೇಕು. ಭೂಮಿ ನಮಗೆ ಬೇಕಾದ ರೀತಿ ಫಸಲನ್ನು ಕೊಡಬೇಕು. ಮಳೆರಾಯ ಮಳೆಸುರಿಸಬೇಕು. ನಾವು ಧಾನ್ಯ ಶುದ್ಧೀಕರಿಸಬೇಕಾದಾಗ ವಾಯುದೇವ ಗಾಳಿ ಬೀಸಬೇಕು. ಹೀಗೆ ವಿವರಿಸುತ್ತಾ ಹೋದರೆ ದೊಡ್ಡ ಪಟ್ಟಿಯೊಂದು ಬೆಳೆಯುತ್ತಾ ಹೋಗುತ್ತದೆ. ಆದರೆ ಇಲ್ಲಿ ಗಮನಿಸಬೇಕಾದ ಯೋಚಿಸಬೇಕಾದ ಅತೀ ಮುಖ್ಯ ವಿಷಯ. ಮನುಷ್ಯ ಮನುಷ್ಯರನ್ನು ಮೆಚ್ಚಿಸಿದರೆ ಇತರ ಜೀವಸಂಕುಲಗಳು ಮನುಷ್ಯನನ್ನೂ ಮೆಚ್ಚಿಸಬೇಕಾಗಿದೆ . . .!! 
       ನಾವು ಯಾವುದೋ ತರ್ಕವನ್ನು, ಉದಾಹರಣೆಗಳನ್ನು ನೀಡುತ್ತಾ ಧೃಡೀಕರಿಸಿಕೊಳ್ಳಬಹುದು. ನಮ್ಮನ್ನು ಹೊರತು ಪಡಿಸಿ ಎಲ್ಲ ಜೀವಸಂಕುಲಗಳೂ ಸರ್ವರಿಗೂ ಉಪಯೋಗವಾಗುವಂತೆ ತಮ್ಮ ಬದುಕನ್ನು ಹೊಂದಿಸಿಕೊಂಡು ಜೀವನ ಸಾಗಿಸುತ್ತವೆ. ಪರೋಪಕಾರಾರ್ಥಂ ಇದಂ ಶರೀರಂ ಎಂದು ಬೇರೊಬ್ಬರಿಗಾಗಿ ಬದುಕುಸಾಗಿಸುತ್ತವೆ. ಅಂತೆಯೇ ನಮಗೆ ಬೆಳಕ ನೀಡ್ವ ಸೂರ್ಯ, ಚಂದ್ರ, ತಂಗಾಳಿ, ಮಳೆ ಇರುವುದಕ್ಕೆ ಜಾಗ, ತಿನ್ನಲು ಆಹಾರ ನೀಡುತ್ತಿರುವ ಭೂಮಿ ಕೂಡ ಪ್ರಕೃತಿಯ ನಿಯಮಾನುಸಾರ ಸಾಗುತ್ತವೆ. ನಮ್ಮೆಲ್ಲರನ್ನೂ ಮೆಚ್ಚಿಸಲು ಪ್ರಯತ್ನಿಸುತ್ತವೆ. ಆದರೆ ನಾವು ನಮ್ಮ ಸ್ವಾರ್ಥಕ್ಕಾಗಿ ಎಲ್ಲವನ್ನೂ ಎಲ್ಲರನ್ನೂ ಬಳಸಿಕೊಳ್ಳುತ್ತೇವೆ. ಇದೆಂಥಾ ವಿಪರ್ಯಾಸ ಅಲ್ವೆ?  ಏನಂತೀರಿ .. .ನಾ ಯಾರ ಮೆಚ್ಚಿಸಲಿ ಹೇಗೆ ಮೆಚ್ಚಿಸಲಿ. . . . .ಅಂತ್ಲೆ !!!? 

ಕೆ.ಎಸ್. ನರಸಿಂಹಸ್ವಾಮಿ ಅವರು ಈ ಉದ್ದೇಶದಿಂದಲೇ ಬರೆದರೇನೋ ?!

ಚಳಿಗಾಲ ಬಂದಾಗ ಎಷ್ಟು ಚಳಿಯೆಂದರು?
ಬಂತಲ್ಲ ಬೇಸಿಗೆ ಕೆಟ್ಟ ಬಿಸಿಲೆಂದರು
ಮಳೆ ಬಿತ್ತೋ ಬಿಡದಲ್ಲ ಶನಿ ಎಂಬ ಟೀಕೆ
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ.

ಚಿಗುರು ಚಿನ್ನದ ನಡುವೆ ಹೂವ ಬಯಸುವರು
ಹೂಗಳ ಕಾಲದಲ್ಲಿ ಹಣ್ಣ ಬಯಸುವರು
ಹಣ್ಣಿನಾ ಗಾತ್ರ ಪೀಚು ಎಂದಿವರ ಟೀಕೆ
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ.


No comments:

Post a Comment