Sunday, 27 November 2011

ಶ್ರೀ ಕೃಷ್ಣ ಭಗದ್ಗೀತಾಮೃತ


ಅಧ್ಯಾಯ 12 : ಭಕ್ತಿಯೋಗ

ಶ್ರೀಕೃಷ್ಣ ಪರಮಾತ್ಮನಿಂದ ತೋರಿಸಲ್ಪಟ್ಟ ವಿಶ್ವರೂಪ ಸಮ್ಯಕ್ ದರ್ಶನದಿಂದ ಧನ್ಯನಾದ ಅರ್ಜುನನು ಶ್ರೀಕೃಷ್ಣನನ್ನು ಕುರಿತು ಯೋಗಾಭ್ಯಾಸ ಮಾಡುವವರಲ್ಲಿ ನಿನ್ನನ್ನು ವಿಶ್ವರೂಪನೆಂತಲೂ, ಅವ್ಯಕ್ತನೆಂತಲೂ ತಿಳಿದು ಪೂಜಿಸುವವರಿದ್ದಾರೆ. ಅವರಲ್ಲಿ ಯಾರಿಗೆ ಯೋಗ ಸಾಧನೆಯಾಗುವುದೋ ತಿಳಿಸು ಎಂದನು.

ಶ್ರೀಕೃಷ್ಣನು ಅರ್ಜುನಾ,
ಮನಸ್ಸನ್ನು ನನ್ನಲ್ಲಿರಿಸಿ ನನ್ನಲ್ಲಿ ಅಧಿಕವಾದ ಆದರವುಳ್ಳವರಾಗಿ ನನ್ನನ್ನು ವಿಶ್ವರೂಪನೆಂದು ನಂಬಿ ಪೂಜಿಸುತ್ತಾ, ಸದಾ ಯೋಗ ಸಾಧನೆಯಲ್ಲಿರುವವರ ಯೋಗವೇ ಹೆಚ್ಚಾದದ್ದಾಗಿ ಅವರು ನನ್ನನ್ನೇ ಹೊಂದುವರು. ನಾನು ಅವ್ಯಕ್ತನೆಂದು ತಿಳಿದು ಎಲ್ಲಾ ಕಡೆಯಲ್ಲಿಯೂ, ಎಲ್ಲದರಲ್ಲಿಯೂ, ಪರಿಪೂರ್ಣನಾಗಿರುವನೆಂದು ನಂಬಿ ಇಂದ್ರಿಯಗಳನ್ನು ನಿಗ್ರಹ ಮಾಡುತ್ತ ಸಕಲವನ್ನೂ ಒಂದೇ ತರೆನಾಗಿ ಕಾಣುತ್ತಾ, ಪ್ರಾಣಿಗಳಿಗೆ ಸದಾ ಹಿತವನ್ನು ಕೋರುತ್ತಾ ನನ್ನನ್ನು ಪೂಜಿಸುವವರೂ ನನ್ನನ್ನೇ ಹೊಂದುವರು. ವಿಧಿವಿಹಿತ ಕರ್ಮಗಳನ್ನು ಆಚರಿಸುತ್ತ ನನ್ನನ್ನೇ ನೆಚ್ಚಿಕೊಂಡು ಸದಾ ಪೂಜಿಸುವವರೇ ಅವರನ್ನು ಜರಾಮರಣದ ಸಮುದ್ರದಿಂದ ದಾಟಿಸಿ ನನ್ನನ್ನು ಸೇರುವಂತೆ ಮಾಡುವೆನು.

ಅಯ್ಯಾ! ಅರ್ಜುನಾ ಮನಸ್ಸನ್ನು ನನ್ನಲ್ಲಿಯೇ ನಿಲ್ಲಿಸು. ಬುದ್ಧಿಯನ್ನು ಕಾರ್ಯದಲ್ಲಿಯೇ ವಿನಿಯೋಗಿಸು. ಆಗ ನೀನು ನನ್ನನ್ನೇ ಸೇರುವೆ. ನನ್ನಲ್ಲಿ ಮನಸ್ಸನ್ನು ನಿಲ್ಲಿಸಲು ಸಾಧ್ಯವಾಗದಿದ್ದರೆ ನನ್ನನ್ನು ಧ್ಯಾನಿಸು, ಅದಕ್ಕೂ ಆಗದಿದ್ದರೆ ಕರ್ಮಗಳನ್ನು ಮಾಡಿ ಅದರ ಫಲವನ್ನು ನನಗೊಪ್ಪಿಸು, ಅದೂ ನಿನ್ನಿಂದಾಗದಿದ್ದರೆ ನಿಷ್ಕಾಮನಾಗಿ ಕರ್ಮಮಾಡಿ ಅದರ ಫಲಗಳನ್ನು ತೊರೆಯುವನಾಗಿ ನನ್ನನ್ನು ಇಂಥವನೆಂದು ತಿಳಿಯುವನಾಗು. ನನ್ನನ್ನು ಧ್ಯಾನಿಸುತ್ತಾ ಮೆಚ್ಚಿಸುವುದೇ ಹೆಚ್ಚಾದದ್ದು. ನನಗೋಸ್ಕರವಾಗಿಯೇ ಕರ್ಮಗಳನ್ನು ಮಾಡಿ ಅದನ್ನು ನನಗೊಪ್ಪಿಸಿ ಬಿಡುವುದು ಧ್ಯಾನಕ್ಕೆ ಮೀರಿದ್ದು. ಪ್ರಾಣಿಹಿಂಸೆ ಮಾಡದೆ ಸಕಲ ಪ್ರಾಣಿಗಳಿಗೂ ಹಿತೈಷಿಯಾಗಿ ಕನಿಕರಗೊಂಡು ತನಗೆಂದು ಯಾವುದನ್ನು ತೆಗೆದಿಟ್ಟುಕೊಳ್ಳದೆ, ಅಹಂಕಾರ, ಮಮಕಾರವನ್ನು ತೊರೆದು ಸುಖ ದುಃಖಗಳನ್ನು ಸಮನಾಗಿ ನೋಡುತ್ತಾ ಸದಾ ಸಂತೋಷ ಚಿತ್ತನಾಗಿ ಮನಸ್ಸನ್ನು, ಬುದ್ಧಿಯನ್ನು ನನ್ನಲ್ಲಿರಿಸಿ ನನ್ನನ್ನು ನಂಬಿಕೊಂಡಿರುವ ಯೋಗವೇ ಉತ್ತಮವು. ಅವನೇ ನನಗೆ ಆಪ್ತನು. ಯಾವ ಮನುಷ್ಯನನ್ನು ನೋಡಿ ಪ್ರಪಂಚವು ಹೆದರುವುದಿಲ್ಲವೋ, ಪ್ರಪಂಚವನ್ನು ನೋಡಿ ಯಾವ ಮನುಷ್ಯನು ಹೆದರುವುದಿಲ್ಲವೋ, ಯಾವನು ಹಿಗ್ಗುವುದನ್ನು ಹೆದರುವುದನ್ನು ಅಸಂತುಷ್ಟಿಯನ್ನು ಬಿಟ್ಟಿರುವನೋ ಅವನೇ ನನಗೆ ಬೇಕಾದವನು. ಇದುಬೇಕು ಇದು ಬೇಡವೆಂಬ ಆಸೆಯಿಲ್ಲದೆ, ಹಿಗ್ಗದೆ ಹಂಬಲಿಸದೆ ಒಳ್ಳೆಯದನ್ನು, ಕೆಟ್ಟದನ್ನು ಬಿಟ್ಟು ನನ್ನನ್ನೇ ನೆಚ್ಚಿಕೊಂಡಿರುವವನೂ ನನಗೆ ಬೇಕಾದವನು. ಶತ್ರು ಮಿತ್ರರೆಂಬ ಬೇಧ ಜ್ಞಾನವನ್ನಿಡದೆ, ಮಾನಾಪಮಾನವೆಂಬುದನ್ನು ಪರಿಶೀಲಿಸದೆ, ಶೀತೋಷ್ಣ ಸಮದರ್ಶಿಯಾಗಿ, ಸುಖ ದುಃಖ ಪರಿಜ್ಞಾನವನ್ನು ತೊರೆದು, ಯಾವುದನ್ನು ಅಂಟಿಸಿಕೊಳ್ಳದೆ, ಹೊಗಳಿದರೂ, ಬೈದರೂ ಲಕ್ಷೀಕರಿಸದೆ, ದೊರೆತದ್ದರಲ್ಲಿ ತೃಪ್ತಿಪಡುತ್ತಾ ಮನೆ ಮಠಗಳನ್ನು ಬಯಸದೆ ಸ್ಥಿರಬುದ್ಧಿಯಿಂದ ನನ್ನನ್ನು ನೆಚ್ಚಿದವನು ನನಗೆ ಬೇಕಾದವನಾಗುತ್ತಾನೆ. ನನ್ನ ಮಾತಿನಲ್ಲಿ ಪ್ರೀತಿಯಿಟ್ಟು ಅದನ್ನು ನಡೆಸುವುದರಲ್ಲಿ ಮನಸ್ಸನ್ನು ಬುದ್ಧಿಯನ್ನು ಕೊಡುತ್ತಾ ನನ್ನನ್ನೇ ನೆನೆಸುವವರೂ ನನಗೆ ಪ್ರೀತಿರಾಗುವರು ಎಂಬುದಾಗಿ ಶ್ರೀಕೃಷ್ಣನು ಭಕ್ತಿಯೋಗದ ಕುರಿತಾಗಿ ಉಪದೇಶಿಸಿದನು.

ಅಧ್ಯಾಯ 13 :   ಕ್ಷೇತ್ರ ಕ್ಷೇತ್ರಜ್ಞ ವಿಭಾಗ ಯೋಗ
ಭಕ್ತಿಯ ವಿಚಾರವನ್ನು ತಿಳಿದ ಅರ್ಜುನ ಶ್ರೀಕೃಷ್ಣನನ್ನು ಕುರಿತು, ಸ್ವಾಮಿ! ಕೃಷ್ಣ ಪ್ರಭೋ  ಪ್ರಕೃತಿ ಎಂದರೇನು? ಪುರಷನೆಂದರೇನು? ಕ್ಷೇತ್ರವೆಂದರೇನು? ಕ್ಷೇತ್ರಜ್ಞರೆಂದರೇನು? ಜ್ಞಾನವೆಂದರೇನು? ಜ್ಞೇಯವೆಂದರೇನು? ಈ ಭೇದಗಳನ್ನು ತಿಳಿಯಲಾಶಿಸುತ್ತೇನೆ ಅನುಗ್ರಹ ಮಾಡಬೇಕೆಂದನು. ಆಗ ಶ್ರೀಕೃಷ್ಣನು ಅರ್ಜುನನ್ನು ಕುರಿತು, ಕ್ಷೇತ್ರವೆಂಬುದೇ ಈ ಶರೀರ; ಈ ಅಂಶವನ್ನು ತಿಳಿದು ಬೋಧಿಸುವವರೇ ಕ್ಷೇತ್ರಜ್ಞರೆನಿಸಿಕೊಳ್ಳುವರು. ಸಮಸ್ತ ಕ್ಷೇತ್ರದಲ್ಲಿಯೂ ಕ್ಷೇತ್ರಜ್ಞರಾಗಿರುವವನೇ ನಾನು. ಕ್ಷೇತ್ರಕ್ಷೇತ್ರಜ್ಞರ ಬೇಧವನ್ನು ತಿಳಿಯುವುದೇ ಜ್ಞಾನವು, ಭೇದವನ್ನು ತಿಳಿಯದಿರುವುದೇ ಅಜ್ಞಾನವು. ಕ್ಷೇತ್ರಕ್ಷೇತ್ರಜ್ಞರ ಭೇದವನ್ನು ತಿಳಿದು ಸದಾ ಭಗವಂತನ ಧ್ಯಾನದಲ್ಲಿ ನಿರತನಾಗಿ ಸರ್ವತ್ರ ಸಮದೃಷ್ಟಿಯಲ್ಲಿರುವವನೇ ಜ್ಞೇಯನು. ಈ ತರದ ಜ್ಞೇಯನೇ ಬ್ರಹ್ಮವು. ಕತೃವಾಗಿ ಮಾಡುವುದಕ್ಕೂ ಕಾರಣವಾಗಿ ಮಾಡಿಸುವುದಕ್ಕೂ ಕಾರ್ಯವಾಗಿ ಮಾಡಿಸಿಕೊಳ್ಳುವುದಕ್ಕೂ ನಿಮಿತ್ತವಾದ ವಸ್ತುವೇ ಪ್ರಕೃತಿ ಎನಿಸಿಕೊಳ್ಳುತ್ತದೆ. ಸುಖ ದುಃಖಾನುಭವವನ್ನನುಭವಿಸುತ ಲಾಭಗಳಿಗೆ ಹಿಗ್ಗಿ ನಷ್ಟಗಳಿಗೆ ಕೊರಗದೆ ಸಮಶೀತೋಷ್ಣವುಳ್ಳವನೇ ಪುರುಷನು. ಪುರುಷನು ಪ್ರಕೃತಿಯ ಅಧೀನನಾಗಿ ಅದರಿಂದ ಹುಟ್ಟಿದ ಗುಣಗಳನ್ನು ಅನುಭವಿಸುವವನು.

ಪೃಧಿವ್ಯಪ್ತೇಜೋವಾಯವ್ಯಾಕಾಶಗಳೆಂಬ ಪಂಚಭೂತಾತ್ಮಕವಾದ ಈ ಶರೀರವು ಅಹಂಕಾರದಿಂದಲೂ, ಇಚ್ಛಾದ್ವೇಷದಿಂದಲೂ, ಸುಖದುಃಖಗಳಿಂದಲೂ ಧೈರ್ಯ, ವಿಕಾರಗಳಿಂದಲೂ, ಕೂಡಿರುವುದೇ ಕ್ಷೇತ್ರವೆನಿಸಿಕೊಳ್ಳುವುದು. ಈ ವಿಧವಾದ ಕ್ಷೇತ್ರದಲ್ಲಿ ನಾನು ಅದಕ್ಕೆ ತಗಲಿಯೂ ತಗಲದೆಯೂ ಇರುವೆನು. ನನಗೆ ಕ್ಷೇತ್ರಜ್ಞನೆಂದು ಜ್ಞಾನಿಗಳು ಹೆಸರಿಟ್ಟಿರುವರು. ಋಷಿಗಳು, ವೇದಗಳಿಂದಲೂ ಬ್ರಹ್ಮ ಸೂತ್ರವಾಕ್ಯಗಳಿಂದಲೂ ಕ್ಷೇತ್ರಜ್ಞನೆನಿಸಿಕೊಂಡಿರುವ ನನ್ನನ್ನೇ ಬಗೆಬಗೆಯಾಗಿ ವಣರ್ಿಸುವರು. ನಾನು ಸಮಸ್ತ ವಸ್ತುವಿನಲ್ಲಿಯೂ ಇರುತ್ತಾ ಅಂತರ್ಬಹಿರ್ವ್ಯಾಪ್ತನಾಗಿ, ಸ್ಥಾವರ ಜಂಗಮನೂ ಆಗಿ ತಿಳಿಯಲಶಕ್ಯವಾಗಿರುವಂತೆ ಸೂಕ್ಷ್ಮನಾದ್ದರಿಂದ ಪ್ರಪಂಚವನ್ನು ಬಿಟ್ಟು ಬೇರೆಯಾಗಿಲ್ಲದಿದ್ದರೂ ಬೇರೆಯಾಗಿರುವಂತೆ ನಿಂತು ಪ್ರಪಂಚವನ್ನು ಹೆರುತ್ತಲೂ, ಹೊರುತ್ತಲೂ, ನುಂಗುತ್ತಲೂ ಇರುವೆನಾದ್ದರಿಂದ ನನಗೆ ಜ್ಞೇಯನೆಂತಲೂ ಹೆಸರಿಟ್ಟಿರುವರು. ಪ್ರಕೃತಿಯು ಪುರುಷನು ಜನನ ಮರಣಾದಿಗಳಿಗೆ ಸಿಲುಕದ ಅನಾದಿ ವಸ್ತುವೆಂದು ತಿಳಿ. ಈ ಎರಡಕ್ಕೂ ಇರುವ ಮುಖ್ಯ ಬೇಧವನ್ನು ತಿಳಿದು ಕ್ಷೇತ್ರಜ್ಞನಾದ ಎನ್ನಲ್ಲಿ ಭಕ್ತಿಯೋಗವನ್ನು ಸಾಧಿಸುತ್ತಾ ಪ್ರಪಂಚದಲ್ಲಿದ್ದರೂ ಇಲ್ಲದವನೆಂತಲೇ ವತರ್ಿಸುತ್ತಾ ಸುಖದುಃಖಗಳಿಗೆ ಸಿಲುಕಿದವನಾದರೂ ಸಿಲುಕದವನಂತೆ ನಡೆಯುತ್ತಾ ಪ್ರಾಣಿಮಾತ್ರದಲ್ಲಿ ಕನಿಕರಪಡುತ್ತಾ. ರಾಗದ್ವೇಷಾದಿಗಳನ್ನು ತೊರೆದು ನಡೆದುಕೊಳ್ಳುವವನೇ ನನ್ನನ್ನು ಸೇರುವನು. ಮಾಡುವ ಕಾರ್ಯವೆಲ್ಲ ಕರ್ಮವೆಂತಲೇ ತಿಳಿದು ಅದು ಪ್ರಕೃತಿಯು ಅಧೀನವಾಗಿರುವುದರಿಂದ, ಅದು ಮೂಡಿಸಿಬಿಡುವುದರಿಂದ ತನಗೇನು ಸಂಬಂಧ-ವಿಲ್ಲವೆಂದು ತಿಳುವವನೇ ಜ್ಞಾನಿಯು. ಅವನೇ ನನ್ನನ್ನು ಸೇರುವನು. ಒಬ್ಬನಾದ ಸೂರ್ಯನು ತನ್ನ ಕ್ರಾಂತಿಯಿಂದ ಪ್ರಪಂಚವನ್ನು ಬೆಳಗುವಂತೆ ಕ್ಷೇತ್ರಜ್ಞನಾದ ನಾನೊಬ್ಬನೇ ಕ್ಷೇತ್ರವನ್ನೆಲ್ಲ ಬೆಳಗುವೆನು. ಶರೀರವನ್ನೆಲ್ಲ ವ್ಯಾಪಿಸಿರುವ ಆತ್ಮನಿಗೆ ಯಾವದೂ ಅಂಟಿಕೊಳ್ಳುವುದಿಲ್ಲವು. ಕ್ಷೇತ್ರ ಕ್ಷೇತ್ರಜ್ಞರ ಸಂಬಂಧದಿಂದಲೇ ಲೋಕದಲ್ಲಿರುವ ಪ್ರಾಣಿಗಳು ಜೀವಿಸಿಕೊಂಡಿರುತ್ತವೆ. ಪರಮೇಶ್ವರನು ಸಮಸ್ತ ಪ್ರಾಣಿಗಳಲ್ಲಿಯೂ ಸಮನಾಗಿ ನೆಲೆಸಿರುವನೆಂದು ತಿಳಿದು ಸಮಸ್ತವೂ ನಾಶವಾದರೂ ಅವನು ನಾಶವಾಗತಕ್ಕವನಲ್ಲವೆಂದು ತಿಳಿದು ಆತನನ್ನು ಅರಿಯುವುದಕ್ಕೆ ಉದ್ಯುಕ್ತಪಡುವ ಬುದ್ಧಿಯೇ ಜ್ಞಾನವೆನಿಸಿಕೊಳ್ಳುವದಲ್ಲದೆ ಈ ಜ್ಞಾನ ಸಾಧನೆಯಲ್ಲಿರುವವನೂ ಇಹದಲ್ಲಿಯೂ ಕೆಡದೆ ಪರದಲ್ಲಿ ಗತಿಯನ್ನು ಹೊಂದುವನು. ನನ್ನನ್ನು ಸೇರುವುದಕ್ಕೆ ಭಕ್ತಿಯೋಗವೂ ಜ್ಞಾನಯೋಗಗಳಾ ವಿನಾ ಮತ್ತಾವುದೂ ಸುಲಭವಾದ ಮಾರ್ಗಗಳಲ್ಲವು ಎಂಬುದಾಗಿ ಉಪದೇಶ ಮಾಡಿದ ಕ್ಷೇತ್ರಕ್ಷೇತ್ರಜ್ಞ ಯೋಗವೆಂಬ ಹೊಲ ಮತ್ತು ಹೊಲದ ತಿಳಿವುಗಾರರ ಭೇದವನ್ನು ತಿಳಿಸಿಕೊಡ್ತುತ್ತಾನೆ.

No comments:

Post a Comment