Sunday, 27 November 2011

ಸಸ್ಯ ಕೌತುಕ


ಈ ಜಗತ್ತಿನಲ್ಲಿ ಯಾವುದು ಕೌತುಕ? ಯಾವುದು ಕೌತುಕವಲ್ಲ? ಒಂದು ದೃಷ್ಟಿಯಲ್ಲಿ ಪ್ರತಿನಿತ್ಯದ ಹಗಲು ರಾತ್ರಿಗಳು, ವಾಷರ್ಿಕ ಋತುಕಾಲ ಚಕ್ರಗಳು, ಬ್ರಹ್ಮಾಂಡದಲ್ಲಿ ಧೂಳಿನ ಕಣದಂತೆ ವ್ಯಾಪಿಸಿದ ನಕ್ಷತ್ರಗಳು, ಭೂಮಿಯಲ್ಲಿ ವ್ಯಾಪಿಸಿದ ಅಪಾರ ವೈವಿಧ್ಯದ ಜೀವಸಂಕುಲ, ಬೆಳಕು ಶಕ್ತಿಯನ್ನು ಆಹಾರವಾಗಿ ಪರಿವತರ್ಿಸುವ ಸಸ್ಯ ಜಗತ್ತು, ಸೂಕ್ಷ್ಮ ಜೀವಕೋಶಗಳಲ್ಲಿರುವ ಸುಸಂಬದ್ಧ ಕಾರ್ಯ ವ್ಯವಸ್ಥೆ, ಬೀಜವೊಂದು ಹೆಮ್ಮರವಾಗಿ ಬೆಳೆಯುವ ಪ್ರಕ್ರಿಯೆ, ಭೋರ್ಗರೆದು ಹರಿವ ನೀರು ವಿದ್ಯುಚ್ಛಕ್ತಿಯಾಗಿ ನಮ್ಮ ಮನೆಗಳಿಗೆ ಹರಿದು ಬೆಳಕು, ಗಾಳಿ ನೀಡಿ, ಸಂಗೀತ ನುಡಿಸುವುದು........ ಹೀಗೆ ಇನ್ನೆಷ್ಟೋ ನಮ್ಮ ನಿತ್ಯ ಜೀವನದ ಘಟನಾವಳಿಗಳು ಕೌತುಕಮಯವೇ ಆಗಿವೆ. ಆದರೆ ಇವೆಲ್ಲವೂ ನಿತ್ಯ ಜೀವನದ ಕ್ರಿಯೆಗಳಾಗಿ ನಮಗೆ ಅಷ್ಟಾಗಿ ಕೌತುಕಗಳೆಂದು ಕಾಣದೇ ಹೋಗಬಹುದು. ಆದುದರಿಂದ ಕೆಲವು ಅಪರೂಪದ ವಿಚಾರಗಳಷ್ಟೇ ನಮಗೆ ಕೌತುಕವೆನಿಸುತ್ತವೆ. ಈ ದೃಷ್ಟಿಯಲ್ಲಿ ಸಸ್ಯ ಲೋಕದಲ್ಲಿ ಗುರುತಿಸಬಹುದಾದ ಕೆಲವು ವಿಶೇಷಗಳನ್ನು ಈ ಮುಂದೆ ತಿಳಿಸಲು ಪ್ರಯತ್ನಿಸಲಾಗಿದೆ.

ಆಫ್ರಿಕಾದ ಕಾಡುಗಳಲ್ಲಿ ಮನುಷ್ಯರನ್ನು ನುಂಗಿ ಹಾಕುವ ಮರಗಳಿವೆಯೇ? ನಡೆದುಕೊಂಡು ಹೋಗುವ ಮರಗಳಿವೆಯೇ? ಸತ್ತವರನ್ನು ಬದುಕಿಸಬಲ್ಲ ಸಸ್ಯಗಳಿವೆಯೇ? ಕೇರಳದ ಕಾಡುಗಳಲ್ಲಿ ದಾರಿ ತಪ್ಪಿಸುವ ಸಸ್ಯಗಳಿವೆಯೇ?..... ಇಂತಹ ಹಲವಾರು ಪ್ರಶ್ನೆಗಳನ್ನು ಕೆಲವರು ನನ್ನಲ್ಲಿ ಕೇಳಿದ್ದಾರೆ. ಆದರೆ ಇವೆಲ್ಲ ಸತ್ಯಕ್ಕೆ ದೂರವಾದ ಅತಿರಂಜಿತ ಕಟ್ಟುಕತೆಗಳು. ಆದರೆ ಕೀಟಗಳನ್ನು ಸೆರೆಹಿಡಿದು ಜೀಣರ್ಿಸುವ ಸಸ್ಯಗಳು, ಮುಟ್ಟಿದರೆ ಜ್ವರ ಬರಿಸುವ ಮರ, ಗಿಡವೊಂದರ ರಸವನ್ನು ಕುಡಿದರೆ ಹೊಸ ಚೈತನ್ಯ - ಇವೆಲ್ಲವೂ ಸತ್ಯ ವಿಚಾರಗಳೇ...

ಇಂತಹ ವಸ್ತುಸ್ಥಿತಿಯಲ್ಲಿ, ಮೇಲ್ಮೋಟಕ್ಕೆ ಹೆಚ್ಚಿನವರಲ್ಲಿ ಆಶ್ಚರ್ಯವನ್ನು ಹುಟ್ಟಿಸಬಲ್ಲ ಕೆಲವು ಸಸ್ಯಗಳನ್ನು ಆಯ್ದುಕೊಂಡು ಈ ಲೇಖನಮಾಲೆ ಸಿದ್ಧಪಡಿಸಲಾಗಿದೆ. ಇನ್ನು ಸಸ್ಯ ಕೌತುಕಗಳು ಎಂದರೆ ಇವು ಹಲವಾರು ರೀತಿಯಲ್ಲಿರಬಹುದು. ಕೆಲವು ಗಾತ್ರದಲ್ಲಿ, ರಚನೆ, ಜೀವನ ಶೈಲಿಯಲ್ಲಿ ಕೌತುಕ ತಂದರೆ ಇನ್ನು ಕೆಲವು ವಿರಳತೆ, ವರ್ತನೆ, ಸಂಖ್ಯೆ, ಪೋಷಣೆಗಳಲ್ಲಿ ಕೌತುಕ ತರಬಹುದು ಮತ್ತೆ ಕೆಲವಲ್ಲಿ ಹೊಂದಾಣಿಕಾ ಕೌತುಕಗಳಿದ್ದರೆ ಇನ್ನು ಕೆಲವಲ್ಲಿ ಅಪೂರ್ವ ಸಂಬಂಧ ಕೌತುಕಗಳು. ಅತಿ ದೊಡ್ಡ ವೃಕ್ಷ, ಅತಿ ಚಿಕ್ಕ ಸಸ್ಯ, ಅತಿ ದೊಡ್ಡ ಪುಷ್ಪ, ಅತಿ ಹಳೆಯ ಮರ... ಇಂತಹ ವಿಚಾರಗಳಿಗೆ ಮುಂದೆ ಓದಿ.

ಅತ್ಯಂತ ಎತ್ತರದ ವೃಕ್ಷಗಳು
ನಗ್ನಬೀಜ ಸಸ್ಯ ಗುಂಪಿಗೆ ಸೇರಿದ ಸೆಕೋಯಾ, ಸೆಕೋಯಾ ಡೆಂಡ್ರಾನ್ ಜಾತಿಯ ವೃಕ್ಷಗಳು ಅತಿ ಎತ್ತರಕ್ಕೆ ಬೆಳೆಯುವುವು. ಸೆಕೋಯಾಡೆಂಡ್ರಾನ್ ಗೈಗಾಂಟಿಯಮ್ 112 ಮೀಟರ್ ಎತ್ತರಕ್ಕೆ ಬೆಳೆಯುತ್ತದೆ - ಎಂದರೆ ಸುಮಾರು 36 ಅಂತಸ್ತುಗಳ ಕಟ್ಟಡದ ಎತ್ತರ. ಈ ಮರದ ಬುಡದ ಸುತ್ತಳತೆ 31.4 ಮೀಟರ್. ಮರದ ಬುಡದಲ್ಲಿ ತೂತುಕೊರೆದು, ಇದರೊಳಗೆ ಎದುರು ಬದರು ವಾಹನ ಚಾಲನೆ ಸಾಧ್ಯವಾಗಿದೆ. ಇಂತಹ ತೂತಿನೊಳಗೆ ಸುಮಾರು ಇಪ್ಪತ್ತು ಜನರು ಸಾಲಾಗಿ ನಿಲ್ಲಬಹುದು. ಒಂದು ಮರದ ತೂಕ ಸುಮಾರು 1500 ಟನ್ಗಳು. ಕ್ಯಾಲಿಫೋನರ್ಿಯಾದಲ್ಲಿ ಬೆಳೆಯುವ ಈ ಮರಗಳಲ್ಲಿ ಕೆಲವು 2,200 ವರ್ಷಕ್ಕೂ ಹಳೆಯವು.

ಆಸ್ಟ್ರೇಲಿಯಾದ ಯಾಕಲಿಪ್ಟಸ್ ಜಾತಿಯ ಕೆಲವು ಮರಗಳೂ ಕೂಡಾ ಆಶ್ಚರ್ಯ ಹುಟ್ಟಿಸುವ ಎತ್ತರಕ್ಕೆ ಬೆಳೆಯುತ್ತದೆ. ಯುಕಲಿಪ್ಟಸ್ ರೆಗ್ನನನ್ಸ್ 114 ಮೀಟರ್ ಎತ್ತರ ಬೆಳೆದು ದಾಖಲೆ ಸ್ಥಾಪಿಸಿದೆ.

ಐದು ಸಹಸ್ರ ವರ್ಷಗಳ ಮರ
ಬ್ರಿಸ್ಟಲ್ಕೋನ್ ಪೈನ್ (ಪೈನಸ್ ಅರಿಸ್ಟೇಟಾ) ಎಂಬ ನಗ್ನ ಬೀಜದ ಪೈನ್ ವೃಕ್ಷಗಳು ಅಮೇರಿಕೆಯ ನಿವೇಡಾ ಪರ್ವತಗಳಲ್ಲಿ ಬೆಳೆಯುತ್ತಿವೆ. ಇವು ಜಗತ್ತಿನಲ್ಲಿಯೇ ಅತಿ ಹೆಚ್ಚು ಪ್ರಾಯದ ಮರಗಳು. ಇವುಗಳ ಪ್ರಾಯ ಸುಮಾರು 4,900 ವರ್ಷಗಳು. ಅದೆಷ್ಟು ರಾತ್ರಿ, ಹಗಲು, ಮಳೆ, ಬಿಸಿಲು, ಗಾಳಿಗಳಿಗೆ ಈ ವೃಕ್ಷಗಳು ಮೂಕಸಾಕ್ಷಿಗಳು!!  ನ್ಯೂ ಇಂಗ್ಲೆಂಡಿನಲ್ಲಿರುವ ಹಾಥರ್ಾನ್ ಬುಷ್ ಎಂಬ ಗಿಡಗಳು ಬ್ರಿಸ್ಟಲ್ಕೋನ್ ಪೈನ್ಗಳಿಗಿಂತಲೂ ಮುದಿಯವಂತೆ! ಈ ಗಿಡಗಳ ಪ್ರಾಯ 10,000 ವರ್ಷಗಳು ಎಂಬ ಉಲ್ಲೇಖವಿದೆ.

ಚಿರಾಯು ಪತ್ರಗಳ ವೆಲ್ವಿಶ್ಚಿಯಾ
1860ರಲ್ಲಿ ವೆಲ್ವಿಶ್ಚ್ ಎಂಬವರಿಂದ ಪತ್ತೆಯಾದ ವೆಲ್ವಿಶ್ವಿಯಾ ಮಿರಾಬಿಲಿಸ್ ಎಂಬ ಸಸ್ಯ ದಕ್ಷಿಣ ಆಫ್ರಿಕಾದ ಕಲಹರಿ ಮರುಭೂಮಿಯಲ್ಲಿ ಮಾತ್ರ ಕಂಡು ಬರುವ ಸಸ್ಯ ವಿಶೇಷ. ವಿನಾಶದ ಅಂಚಿನಲ್ಲಿರುವ ಈ ಸಸ್ಯದ ಕೆಲವೇ ಪ್ರತಿನಿಧಿಗಳು ಈಗ ಅಲ್ಲಿ ಬೆಳೆಯುತ್ತಿವೆ. ಅನಾವೃತ ಬೀಜ ಸಸ್ಯ ವರ್ಗಕ್ಕೆ ಸೇರಿದ ಇದರ ವಿಶೇಷವೆಂದರೆ, ಈ ಗಿಡಕ್ಕೆ ಎರಡೇ ಎಲೆಗಳು. ಈ ಎರಡು ಎಲೆಗಳೇ ಗಿಡದ ಜೀವನದುದ್ದಕ್ಕೂ 400-1500 ವರ್ಷಗಳ ಕಾಲ, ಬೆಳೆಯುತ್ತಲೇ ಇರುತ್ತವೆ. ಎಲೆಗಳು 2-4 ಮೀಟರ್ ಉದ್ದಕ್ಕೆ ಬೆಳೆಯುತ್ತವೆ. ಎರಡು ಲಾಡಿಗಳಂತೆ ಬೆಳೆಯುತ್ತಲೇ ಇರುವ ಎಲೆಗಳು ಉದ್ದದಲ್ಲಿ ಬೆಳೆದಂತೆ, ತುದಿಯಲ್ಲಿ ಸೀಳುಗಳಾಗುತ್ತವೆ. ಎಲೆಗಳು 2-4 ಮೀಟರ್ ಉದ್ದಕ್ಕೆ ಬೆಳೆಯುತ್ತವೆ. ಕ್ರಮೇಣ ತುದಿಭಾಗ ಒಣಗಿ ಸಾಯುತ್ತಿರುತ್ತದೆ. ಆದರೆ ಬುಡದಲ್ಲಿ ಬೆಳೆಯುತ್ತಲೇ ಇರುತ್ತವೆ. ಮರುಭೂಮಿಯ ಮರಳಲ್ಲಿ ಬೆಳೆಯುವ ಈ ಗಿಡಕ್ಕೆ ಸೊಕ್ಕಿ ಬೆಳೆದ ಮೂಲಂಗಿ ಅಥವಾ ಬೀಟ್ರೂಟ್ನಂತೆ ಕಾಣುವ ಭೂಗತ ಗಡ್ಡೆಯಿದೆ. ಈ ಗಡ್ಡೆಯ ಅಗಲ ಒಂದು ಮೀಟರ್ ಇದ್ದರೆ ಎತ್ತರ ಒಂದು ಅಡಿಗಿಂತಲೂ ಕಡಿಮೆ. ನೆಲದ ಮೇಲಕ್ಕೆ 5-6 ಸೆ.ಮೀ ಎತ್ತರಕ್ಕಷ್ಟೇ ಬೆಳೆಯುವ ಈ ಕುಬ್ಜ ಸಸ್ಯದ ಚಿರಾಯು ಎಲೆಗಳು ನೆಲದಲ್ಲಿ ಹಬ್ಬಿರುತ್ತವೆ. ಗಿಡದ ಬೇರುಗಳು 2-3 ಮೀಟರ್ ಆಳಕ್ಕೆ ಬೆಳೆಯುತ್ತವೆ. ಇಂತಹ ಅಪರೂಪದ ಸಸ್ಯದ ರಕ್ಷಣೆಗೆ ಅಲ್ಲಿಯ ಸರಕಾರ ಕಾಳಜಿ ವಹಿಸಿದೆ. ಈ ಗಿಡವನ್ನು ನಾಶಪಡಿಸಿದವರು ದೊಡ್ಡ ಮೊತ್ತದ ದಂಡ ಹಾಗೂ ಜೈಲುವಾಸ ಅನುಭವಿಸಬೇಕಾಗುತ್ತದೆ. ಐದು ವರ್ಷಗಳ ಕಾಲ ಮಳೆ ಬೀಳದಿದ್ದರೂ ವೆಲ್ವಿಶ್ಚಯಾ ಗಿಡಗಳು ಸಾಯಲಾರವಂತೆ.....!

ದೈತ್ಯ ಪುಪ್ಪ - ರೆಪ್ಲಿಷಿಯಾ
ಕಾಂಡ ಎಲೆಗಳೆಂಬ ಭಾಗಗಳಿಲ್ಲದಿದ್ದರೂ, ಸಸ್ಯ ಪ್ರಪಂಚದಲ್ಲೇ ಅತಿದೊಡ್ಡ ಹೂಬಿಡುವ ಸಸ್ಯ-ರೆಪ್ಲಿಷಿಯಾ. 1818ರಲ್ಲಿ ರಾಬಟರ್್ ಬ್ರೌನ್ ಎಂಬ ಸಸ್ಯವಿಜ್ಞಾನಿ ಟಿ.ಎಸ್. ರ್ಯಾಫಲ್ಸ್ ಮತ್ತು ಜೆ.ಆರ್ನಾಲ್ಟ್ ಎಂಬುವರ ಜ್ಞಾಪಕಾರ್ಥ ಈ ಗಿಡಕ್ಕೆ ರೆಪ್ಲಿಷಿಯಾ ಆರ್ನಾಲ್ಡಿಯಾಯೈ ಎಂಬ ಹೆಸರಿನ್ನಿತ್ತನು.

ರೆಪ್ಲಿಷಿಯಾ ಒಂದು ಪರಾನ್ನ ಜೀವಿ ಸಸ್ಯ - ತನ್ನ ಆಹಾರವನ್ನು ತಾನೇ ತಯಾರಿಸಿಕೊಳ್ಳಲಾರದು. ಕಾಡು ದ್ರಾಕ್ಷಿಬಳ್ಳಿಯ ಬೇರುಗಳಿಂದ ಆಹಾರವನ್ನು ಕಬಳಿಸಿಕೊಳ್ಳುವುದು. ಇದರ ಸಸ್ಯದೇಹವೆಂದರೆ ಶಿಲೀಂಧ್ರದಂತಹ ಸೂಕ್ಷ್ಮ ರೋಮತಂತುಗಳಷ್ಟೇ! ಆದರೆ ಇದು ಬಿಡುವ ಹೂ ಮಾತ್ರ ಸಸ್ಯ ಜಗತ್ತಿನಲ್ಲೇ ದೊಡ್ಡದು. ನೆಲದಡಿಯ ಸೂಕ್ಷ್ಮರೋಮಗಳಿಂದ ದೊಡ್ಡ ಬುಟ್ಟಿಯಂತಹ ಹೂವು ಮಣ್ಣಿನಿಂದ ಮೇಲಕ್ಕೇಳುತ್ತದೆ. ಹೂವಿನ ಸುತ್ತಳತೆ 3 ಮೀಟರ್, ವ್ಯಾಸ ಒಂದು ಮೀಟರ್, ತೂಕ
7 ಕಿಲೋ ಗ್ರಾಂ. ಹೂವಿನ ಮೊಗ್ಗೆ ಆತಿಥೇಯ ಗಿಡದ ಬೇರಿನ ಒಳಗೇ ಬೆಳೆದು, ಬೇರನ್ನು ಒಡೆದು ಹೊರಬರಲು 188 ದಿವಸಬೇಕು. ಅರಳಿ ಹೂವಾಗಲು ಮುಂದೆ 310 ದಿವಸಗಳು. ಹೀಗೆ ಬೆಳೆದು ಅರಳಲು ಸುಮಾರು ಒಂದು ವರ್ಷ ತೆಗೆದುಕೊಂಡ ಹೂವು ನಾಲ್ಕೇ ದಿವಸಗಳಲ್ಲಿ ಬಾಡಿ ಕುಪ್ಪೆಯಾಗುತ್ತದೆ. ದೊಡ್ಡ ಬುಟ್ಟಿಯ ಗಾತ್ರ, ಆಕರ್ಷಕ ಬಣ್ಣದ ಈ ಹೂವಿಗೆ ಮರುಳಾಗಿ ನಾವು ಹತ್ತಿರ ಹೋದರೆ ಮಾತ್ರ ಈ ಹೂವು ಹೊರಸೂಸುವ ಕೊಳೆತ ಮಾಂಸದ ಕೆಟ್ಟವಾಸನೆಯನ್ನು ಸಹಿಸಿಕೊಳ್ಳಬೇಕು. ಹೂ ದೈತ್ಯಗಾತ್ರದ್ದಾದರೂ, ಇದರ ಬೀಜಗಳು ಮಾತ್ರ ಗಸಗಸೆಕಾಳಿನಂತಿವೆ. ಪಶ್ಚಿಮ ವಲಯದ ದಟ್ಟ ಕಾಡುಗಳಿಗಷ್ಟೇ ರೆಪ್ಲಿಷಿಯಾ ಸೀಮಿತಗೊಂಡಿದೆ.

ಊಧ್ರ್ವಮೂಲ ಅಧಃ ಶಾಖಮ್ - ಬೊಬಾಬ್
ಟ್ರಾಫಿಕಲ್ ಆಫ್ರಿಕಾ, ಮಡಗಾಸ್ಕರ್ ಹಾಗೂ ಆಸ್ಟ್ರೇಲಿಯಾಗಳಿಗೆ ಸೇರಿದ ಬೊಬಾಬ್ (ಃಚಿಠಛಚಿಛ) ಮರಗಳ ವೈಜ್ಞಾನಿಕ ಹೆಸರು - ಅಡನ್ಸೋನಿಯಾ ಡಿಜಿಟೇಟಾ. ಕೆಲವರು ಇವುಗಳನ್ನೇ ಕಲ್ಪವೃಕ್ಷಗಳೆಂದು ಹೆಸರಿಸಿದ್ದಾರೆ. ಭರಣಿಯಾಕಾರದ ಈ ಕುಬ್ಜಡೊಳ್ಳು ಮರಗಳ ಗರಿಷ್ಠ ಎತ್ತರ 80 ಅಡಿಗಳಾದರೆ ಕಾಂಡದ ಸುತ್ತಳತೆ 30 ಅಡಿಗಳು. 5-6 ಜನರು ಕೈ ಜೋಡಿಸಿದರೆ ಕಾಂಡವನ್ನು ಆವರಿಸಿಕೊಳ್ಳಬಹುದು. ಭರಣಿಯಂತಹ ಕಾಂಡದ ತುದಿಯಲ್ಲಿ ಮಾತ್ರ ಇರುವ ಶಾಖೋಪಶಾಖೆಗಳು ಎಲೆ ಉದುರಿಸಿ ನಿಂತಾಗ, ತಲೆಕೆಳಗಾದ ಮರದಂತೆ ಕಂಡು ಬರುವುದು.

ಆಫ್ರಿಕಾದ ಒಂದು ಬೊಬಾಬ್ ಮರದ ಸುತ್ತಳತೆ 100 ಅಡಿಗಳು. ಪೂರ್ವ ಜಿಂಬಾಬ್ವೆಯ ಮಾರ್ಗದ ಬದಿಗಳಲ್ಲಿ ಬೆಳೆಯುವ ಈ ಡೊಳ್ಳು ಮರಗಳನ್ನು ಬೆಳೆಯುತ್ತಿದ್ದಂತೆಯೇ ಕೊರೆದು ಬಸ್ ತಂಗು ದಾಣಗಳನ್ನು ನಿಮರ್ಿಸಿದ್ದಾರಂತೆ. ಈ ಮರದ ಇಂತಹ ಪೊಟರೆಗಳಲ್ಲಿ ಸುಮಾರು 40 ಜನ ಮಳೆ, ಬಿಸಿಲು ಗಾಳಿಗಳಿಂದ ರಕ್ಷಣೆ ಪಡೆಯಬಹುದಂತೆ. ತಮಿಳುನಾಡಿನ ಕೆಲವೆಡೆ ಹಾಗೂ ಧಾರವಾಡದ ಸಮೀಪ ಕೆಲವು ಬೊಬಾಬ್ ಮರಗಳನ್ನು ಕಾಣಬಹುದು. ಇವನ್ನು ಅರಬರು ಆಫ್ರಿಕಾದಿಂದ ನೂರಾರು ವರ್ಷಗಳ ಹಿಂದೆ ತಂದು ನೆಟ್ಟರು ಎಂದು ನಂಬಲಾಗಿದೆ.
                                                                                                                        - ಮುಂದುವರೆಯುವುದು . . . .  .

1 comment:

  1. This comment has been removed by the author.

    ReplyDelete