ಗರಡಿ ದಿಮ್ಮ ರಂಗಣ್ಣನ ಹತ್ತು ವರ್ಷದ ಮಗ ಆ ಸಂಜೆ ಮನೆಗೆ ಬಂದಾಗ ಬಲಗಣ್ಣು ನೀಲಿಗಟ್ಟಿತ್ತು. ಎಡತೋಳು ಜೋಲು ಬಿದ್ದಿತ್ತು. ಬಲಗಾಲು ಕುಂಟುತ್ತಿದ್ದ; ಮೂಗಿನಲ್ಲಿ ರಕ್ತ ಸುರಿದು ತುಟಿಮೇಲೆ ಹೆಪ್ಪುಗಟ್ಟಿದ ಗುರ್ತಿತ್ತು.
ಗರಡಿ ದಿಮ್ಮರಂಗಣ್ಣನಿಗೆ ತುಂಬಾ ದುಃಖವಾಯ್ತು. ಯಾಕ್ಲಾ ಮಗಾ ಇಷ್ಟು ಪೆಟ್ಟಾಗೈತಿ! ತುಂಬಾ ನೋವಾಗ್ತದಾ? ಜಟಕಾಕ್ಕೆ ಸಿಕ್ಕಿಬಿದ್ಯಾ? ಆಟೋರಿಕ್ಷಾಗ್ ಟಾಂಗ್ ಕೊಟ್ಯಾ? ರಸ್ತೇಲಿ ಜಾರಿ ದೊಡ್ಡ ಚರಂಡಿಗ್ ಬಿದ್ಯಾ? ಎಂದು ಮಗನ ತಲೆ ಸವರುತ್ತಾ ಸೊರಗಿದ ದನಿಯಲ್ಲಿ ಕೇಳಿದ.
ಮಗನಿಗೆ ದುಃಖ ತುಂಬಿ ಬಂತು. ಅಪ್ಪನಿಗೆ ಇಷ್ಟು ದುಃಖ ಆಯ್ತಲ್ಲ ಅಂತ. ಅಪ್ಪನ ಗಿರಿಜಾಮೀಶೇ ತುದೀನ ನವಿರಾಗಿ, ಎಳೆಬೆರಳಲ್ಲಿ ಹುರಿಗೊಳಿಸುತ್ತಾ ಮೆಲು ದನಿಯಲ್ಲಿ ಹೇಳಿದ.
ಇಲ್ಲಾ ಅಪ್ಪ. ಜಟ್ಕಾಕ್ಕೆ ಸಿಗ್ಲಿಲ್ಲ. ಆಟೋರಿಕ್ಷಾಗೂ ಟಾಂಗ್ ಕೊಡ್ಲಿಲ್ಲ, ರಸ್ತೇಲಿ ಜಾರಿ ಬೀಳ್ಲೂ ಇಲ್ಲ. ಸಂಜೆ ಕಾಪುನ ಗರ್ಡಿತಾವ ಹಾಡ್ತಾ ಹೋಗ್ತಿದ್ದೆ. ಒಳಗಿಂದ ಪೈಲ್ವಾನ್ ಕನಕಾಜೆಟ್ಟಿ ಹೈದ ಹೊರಗೆ ಬಂದ; ಯಾವ್ನೋ ಕೇಕ್ಡಿಕೆ, ನಮ್ಮ ಗರ್ಡಿತಾವ ಹಾಡ್ತಾ ಹೋಯ್ತಿರೋನು ಅಂತ ನನ್ನ ಸೀದಾ ತೋಳು ಹಿಡಿದ. ಎಡಗೈ ಮುಷ್ಠಿ ಹಿಡಿದು ಒಂದು ಮಡಗಿದೆ ಅವನ ಗಲ್ಲಕ್ಕೆ! ಅವ ನನ್ನ ತೋಳು ತಿರುಚಿದ. ನಾ ದೋಬಿ ಪಟಕ್ ಹಾಕಿದೆ. ಬಿದ್ದ ಅವ.
ಗರಡಿ ದಿಮ್ಮ ರಂಗಣ್ಣನಿಗೆ ಕೋಪ ಬಂದು ದುಃಖ ಇಂಗಿಹೋಯ್ತು. ಮಗನ್ನ ನೂಕಿದ, ಧ್ರುವನನ್ನು ಹಿಂದೊಮ್ಮೆ ಅವನಪ್ಪ ನೂಕಿದಂತೆ;
ಏನ್ ಮಗಾ! ಆ ಕಳಪೆ ಜಟ್ಟಿ ಮಗನ ಕೈಲಿ ಪೆಟ್ಟು ತಿಂದುಬಂದೆಯಾ? ನನ್ನ ಮಗನಾ ನೀನು? ಜೇಡರ ಉಳ ಇದ್ದಾಂಗಿದಾನೆ ಆ ಕಡ್ಡೀ ಪೈಲ್ವಾನ. ಆ ಹೈದಂಗೆ ಹದಿನೆಂಟು ವಯಸ್ಸಾಗಿಬರ್ೋದು ಹಂಗೂ ಅವನ ಕೈಲಿ ಸೋತೆಯಾ ಎಂದು ರೇಗಿದ ಗರ್ಡಿ ರಂಗಣ್ಣ.
ಅಪ್ಪಾ! ಸತ್ತೋರ ಮಾತ್ನಾಡೋವಾಗ ಬೈಬಾರ್ದು ಅಂತ ನೀನೇ ಹೇಳಲಿಲ್ವಾ ಅಂದಾ ಮಗ. . . . !
:) :)
No comments:
Post a Comment