Sunday, 27 November 2011

ಕನ್ನಡ ಭಗವದ್ಗೀತೆ (ಡಿ.ವಿ.ಜಿ. ಯವರ ಮಂಕುತಿಮ್ಮನ ಕಗ್ಗ ಶ್ರೇಣಿ)


ಸರಿಯಾಗಲಿಲ್ಲವದು ಸರಿಯಿದಲ್ಲವೆನುತ್ತ |
ಹರಡಿಕೊಳಬೇಡ ಮುಳ್ಳನು ಹಾಸಿಗೆಯಲಿ ||
ಕೊರೆಯಾದೊಡೇನೊಂದು? ನೆರೆದೊಡೇನಿನ್ನೊಂದು ?|
ಒರಟು ಕೆಲಸವೊ ಬದುಕು - ಮಂಕುತಿಮ್ಮ

Saying this didn’t work out right, this is not right, don’t
Spread thorns on your bed. What if something is
Missing, what if something else is in excess?
Life is rough work  – Dim tim


ಎಲ್ಲ ಕೆಲಸಗಳು ಸರಿಯಾಗಿ ನಡೆಯಬೇಕೆಂಬುದೇ ಎಲ್ಲರ ಆಸೆ. ಆದರೆ ನರನ ಜೊತೆಗೆ ಕರ್ಮ, ದೈವ ಎರಡೂ ಇದೆಯಲ್ಲ. ಇನ್ನು ಬೇರೆಯವರ ಪ್ರಭಾವವೂ ಪ್ರಕೃತಿಯ ಪ್ರಭಾವವೂ ನಮ್ಮ ಮೇಲೆ ಬೀಳುವುದಲ್ಲವೇ? ಆದ್ದರಿಂದ ಕೆಲಸಗಳು ಎಲ್ಲ ಸರಿಯಾಗಲಿಲ್ಲ, ಇದು ಸರಿಯಿಲ್ಲ, ಅದು ಸರಿಯಿಲ್ಲ ಎಂದು ಮೈ ಪರಚಿಕೊಳ್ಳುವುದು ತಿಳಿವಳಿಕೆಯ ಅಭಾವ ಎಂದು ಹೇಳಬೇಕು. ಹೀಗೆ ಮೈ ಪರಚಿಕೊಳ್ಳುವುದು ತನ್ನ ಹಾಸಿಗೆಯಲ್ಲಿ ತನ್ನ ಮುಳ್ಳನ್ನು ಹರಡಿಕೊಂಡಂತೆ. ಪೂಜೆ ಮಾಡುವ ಸಂದರ್ಭದಲ್ಲಿ ಇದೇನು ಮಲ್ಲಿಗೆ ಹೂ ತನ್ನಿರೆಂದರೆ ದಾಸವಾಳದ ಹೂ ತಂದಿದ್ದೀರಿ, ನೈವೇದ್ಯಕ್ಕೆ ಸಜ್ಜಿಗೆಯನ್ನು ಮಾಡಿರೆಂದು ಹೇಳಿದರೆ ಇನ್ನೇನನ್ನೋ ಮಾಡಿದ್ದೀರಿ ಎಂದು ಕೋಪಗೊಂಡರೆ ಅದರಿಂದ ಆದ ಫಲ ಮನಸ್ಸಿನ ಅಸಮಾಧಾನ ಒಂದೇ. ಒಂದು ಸಣ್ಣ ಕೊರತೆಯಾದರೆ ತಾನೇ ಏನು? ಎಲ್ಲವೂ ಪೂರ್ಣವಾಗಿ ಆದರೆ ತಾನೆ ಏನು? ಈ ಜಗತ್ತು ನಡೆಯುವುದು ಅನೇಕ ಸಂದರ್ಭಗಳ ಹೊಂದಾಣಿಕೆಯಿಂದ. ಅದರಲ್ಲಿ ಏರುಪೇರಾಗುವುದರಲ್ಲಿ ಆಶ್ಚರ್ಯವೇನು? ಬದುಕು ಎಂಬುದು ಒಂದು ಒರಟು ಕೆಲಸ. ಇಲ್ಲಿ ನಾಜೂಕು ಇರಬೇಕಾದದ್ದು ನಮ್ಮ ಮನಸ್ಸಿನಲ್ಲಿ. ಜೀವನವನ್ನು ಹಾಗೆ  ನೋಡದೆ ಅಸಮಾಧಾನ ಪಟ್ಟುಕೊಂಡರೆ ಅದರಿಂದ ನಮಗೇ ನಷ್ಟ 

No comments:

Post a Comment