ಆಧುನಿಕತೆಯ ಪಿತ್ತ ನೆತ್ತಿಗೇರಿ ನಮ್ಮ ಸಾಂಸ್ಕೃತಿಕ ನೆಲೆ, ಪರಂಪರೆ, ಆಚಾರ ವಿಚಾರಗಳು ಕಳೆದುಹೋಗುತ್ತಿರುವ ಮತ್ತು ಎಲ್ಲರ ಪ್ರತಿಷ್ಠೆ, ಸ್ವಾರ್ಥ ಮತ್ತು ಹಣದಾಹೀ ಪ್ರವೃತ್ತಿಗಳೇ ತಾಂಡವವಾಡುತ್ತಿರುವ ಬೆಂಗಳೂರಿನಲ್ಲಿ ಪ್ರತೀ ವರ್ಷವೂ ವಿಸ್ಮಯವೊಂದು ನಡೆಯುತ್ತಲೇ ಇದೆ. ಯಾವುದೇ ವಿದೇಶೀ ಅನುಕರಣೆಯೂ ಇದನ್ನು ಹಿಂದೂಡಲಾಗಿಲ್ಲ. ಇಡೀ ಪ್ರಪಂಚದಲ್ಲಿ ಹುಡುಕಿದರೂ ಇದು ನೋಡಲು ಸಿಗುವುದೂ ಇಲ್ಲ. ಇದು ಏನು ಅಂತ ಯೋಚಿಸ್ತಾ ಇದೀರಾ? ಚುಮು-ಚುಮು ಚಳಿಯ ನಡುವೆ ಎಲ್ಲರನ್ನೂ ರಂಜಿಸುವ ಊರ ಜಾತ್ರೆ ಕಡಲೇಕಾಯಿ ಪರಿಷೆ.
ಪ್ರತೀ ವರ್ಷದ ಕಾರ್ತೀಕ ಮಾಸದ ಕೊನೆಯ ಸೋಮವಾರ ಮತ್ತು ಮಂಗಳವಾರ ಬೆಂಗಳೂರಿನ ಬಸವನಗುಡಿಯಲ್ಲಿ ನಡೆಯುವ ಜಾತ್ರೆಯೇ ಕಡಲೇಕಾಯಿ ಪರಿಷೆ. ಹಬ್ಬದ ರೂಪದಲ್ಲಿ ನಡೆಯುವ ಈ ಜಾತ್ರೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಳ್ಳುತ್ತಾರೆ. ತಾವು ಹರಸಿಕೊಂಡ ಮಾತನ್ನು ಭಕ್ತಿಯಿಂದ ನಡೆಸಿಕೊಳ್ಳುವುದೇ ಈ ಜಾತ್ರೆಯ ವಿಶೇಷ ಮತ್ತು ಈ ದಿನಗಳ ಮಹತ್ವ. ಎಷ್ಟೇ ಬದಲಾವಣೆ ಆದರೂ ಇಲ್ಲಿನ ಸಂಪ್ರದಾಯ ಮತ್ತು ಸಂಸ್ಕೃತಿ ಹಾಗೂ ಆಚರಣೆಗೆ ತೊಡಕಾಗುತ್ತಿಲ್ಲ ಎನ್ನುವುದು ಈ ಪರಿಷೆಯ ಜನಪ್ರಿಯತೆಗೆ ಸಾಕ್ಷಿ.
ಈಗಿನ ಬಸವನಗುಡಿ ಪ್ರದೇಶವನ್ನು ಹಿಂದೆ ಸುಂಕೇನಹಳ್ಳಿ ಎಂದು ಕರೆಯಲಾಗುತ್ತಿತ್ತು. ಆಗ ಇಲ್ಲಿ ರೈತರು ಬೆಳೆಯುತ್ತಿದ್ದ ಪ್ರಮುಖ ಬೆಳೆ ಕಡಲೆಕಾಯಿ. ಬೆವರು ಸುರಿಸಿ ಬೆಳೆದ ಕಡಲೆಗೆ ಬಸವನ ಕಾಟವಿತ್ತು. ಯಾವುದೋ ಸಮಯದಲ್ಲಿ ಕಣ್ಣು ತಪ್ಪಿಸಿ ಲಗ್ಗೆ ಇಡುತ್ತಿದ್ದ ಬಸವ ಬೆಳೆದ ನೆಲಗಡಲೆಯನ್ನು ಮೆದ್ದು ಹೋಗುತ್ತಿದ್ದ. ರೋಸಿ ಹೋಗಿದ್ದ ಜನರು ಇದನ್ನು ತಪ್ಪಿಸಲು ಹಗಲಿರುಳೆನ್ನದೆ ಮಾರಕಾಸ್ತ್ರಗಳೊಂದಿಗೆ ಕಾಯತೊಡಗಿದರು. ಒಂದು ದಿನ ರೈತರು ಅಲ್ಲಿಗೆ ಬಂದ ಬಸವನ ಮೇಲೆ ಏಕಾಏಕಿ ದಾಳಿ ಇಡಲು ಮುಂದಾದಾಗ ಬಸವ ಕಾಲಿಗೆ ಬುದ್ಧಿ ಹೇಳಿತು. ಜನರೂ ಅದನ್ನು ಹಿಂಬಾಲಿಸಿದರು. ಬಸವನ ವೇಗವೂ ಅಧಿಕವಾಯಿತು. ಕೊನೆಗೆ ಗುಡ್ಡ ಏರಿ ಅದರ ಮೇಲೆ ಎಲ್ಲರಿಗೂ ಕಾಣುವಂತೆ ದೊಡ್ಡದಾಗಿ ಬೆಳೆದು ನಿಂತು ಕಲ್ಲಾಯಿತಂತೆ.
ನಂತರ ಇದನ್ನು ದೈವೀ ಶಕ್ತಿಯೆಂದು ತಿಳಿದು ತಪ್ಪಿನ ಅರಿವಾಗಿ ದೇವರನ್ನು ದಂಡಿಸಹೋದೆವೆಂಬ ಅಳುಕು, ಭಯ ಕಾಡತೊಡಗಿತು. ಜೊತೆಗೆ ಬಸವನೂ ಬೆಳೆಯತೊಡಗಿದ ಮತ್ತು ಬೆಳೆಯೂ ಒಣಗತೊಡಗಿತು. ಆಗೆ ಎಲ್ಲಾ ರೈತಾಪಿಗಳು ಒಟ್ಟಿಗೆ ಊರದೈವವಾಗಿದ್ದ ಗಂಗಾಧರೇಶ್ವರನಲ್ಲಿ ಮೊರೆ ಹೋದರು. ಅಲ್ಲದೇ ನಾವು ಬೆಳೆದ ಬೆಳೆಯನ್ನು ಮೊದಲು ಬಸವನಿಗೇ ಅಪರ್ಿಸುವುದೆಂದು ಹರಸಿಕೊಂಡರು. ಇದರ ಜೊತೆಗೆ ಬೆಳೆಯುತ್ತಿದ್ದ ಬಸವನಿಗೆ ಕಡಿವಾಣ ಹಾಕಲು ಜ್ಯೋತಿಷಿಗಳ ಮಾರ್ಗದರ್ಶನದ ಮೇರೆಗೆ ಬಸವನ ತಲೆಯ ಮೇಲೆ ದೊಡ್ಡ ಮೊಳೆಯೊಂದನ್ನು ಹೊಡೆದರು. ಅದು ಇಂದಿಗೂ ತ್ರಿಶೂಲದಂತೆ ಕಾಣುವುದನ್ನು ನಾವು ಗಮನಿಸಬಹುದು.
1537ರಲ್ಲಿ ನಾಡಪ್ರಭು ಕೆಂಪೇಗೌಡರು ಈ ದೊಡ್ಡ ಬಸವನಿಗೆ ಗುಡಿಯೊಂದನ್ನು ಕಟ್ಟಿಸಿದರಂತೆ. ಅಂದಿನಿಂದ ಸುಂಕೇನಳ್ಳಿ ಬಸವನಗುಡಿಯಾಗಿ ಪರಿಣಮಿಸಿತು. ಬಸವನಗುಡಿ ಇರುವ ಜಾಗ ಬಸವನಗುಡಿ ಬಡಾವಣೆಯೇ ಆಗಿದೆ. ಅಂದು ರೈತಾಪಿ ಜನರು ದೇವನಲ್ಲಿ ಹರಸಿಕೊಂಡಂತೆ ಇಂದಿಗೂ ಮೊದಲು ಬಸವನಿಗೆ ಎಲ್ಲವನ್ನೂ ಅಪರ್ಿಸಿ ನಂತರ ಮಾರಾಟ ಪ್ರಾರಂಭಿಸುತ್ತಾರೆ.
ನಾಡಪ್ರಭು ಕೆಂಪೇಗೌಡರೂ ಕೂಡ ಈ ಪರಿಷೆಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಿದ್ದರಂತೆ. ಕಾರಣ ರೈತರು ಹೊರಗಿನಿಂದ ಬರುವ ಜನರೊಂದಿಗೆ ತಮ್ಮ ಬೆಳೆಯನ್ನು ವಿನಿಮಯ ಮಾಡಿಕೊಳ್ಳಲಿ ಎಂಬ ಭಾವನೆ ಇದ್ದೀತು ಎನಿಸುತ್ತದೆ. ಹಿಂದೆ ರೈತರಿಗೆ ಉತ್ತಮ ಮತ್ತು ಫಲಭರಿತ ಬೆಳೆ ಬೆಳೆದರೂ ಮಾರಾಟ ಮಾಡುವುದು ಬಹಳ ಕಷ್ಟಕರವಾಗಿತ್ತು. ಊರಿನ ಸಂತೆ ಜಾತ್ರೆ ರಥೋತ್ಸವಗಳೇ ಪ್ರಮುಖ ಸ್ಥಳಗಳಾಗಿದ್ದವು. ಅದೂ ಕೂಡ ಅಲ್ಪಪ್ರಮಾಣದಲ್ಲಿ. ಹಾಗಾಗಿ ರೈತರಿಗೆ ಬೆಳೆದ ಬೆಳೆಯನ್ನು ಪೂರ್ಣಪ್ರಮಾಣದಲ್ಲಿ ಮಾರಾಟಮಾಡುವುದು ಕಷ್ಟವಾಗಿತ್ತು; ಕೊಳ್ಳುವವರೇ ಇರುತ್ತಿರಲಿಲ್ಲ. ಕೇವಲ ಬೆಳೆದ ಪದಾರ್ಥದ ಜೊತೆಗೆ ಮತ್ತೊಂದು ಪದಾರ್ಥದ ವಿನಿಮಯವೇ ಹೆಚ್ಚಾಗಿತ್ತು. ಈ ಸಂಪ್ರದಾಯವನ್ನು ಇಂದಿಗೂ ನಾವು ಹಳ್ಳಿಗಳಲ್ಲಿ ಗಮನಿಸಬಹುದು.
ಇದರ ಪ್ರಾಮುಖ್ಯತೆಯನ್ನು ಅರಿತ ನಾಡಪ್ರಭು ಕೆಂಪೇಗೌಡ ತನ್ನ ರಾಜ್ಯದ ವಿವಿಧೆಡೆಗಳಲ್ಲಿ ಜಾತ್ರೆಗಳನ್ನು ಆಯೋಜಿಸತೊಡಗಿದ. ಅದರಲ್ಲಿ ಅತೀ ಪ್ರಮುಖವೂ ವಿಶಿಷ್ಟವೂ ಆದದ್ದೇ ಈ ಕಡಲೇಕಾಯಿ ಪರಿಷೆ. ಕಾರಣ ಬೆಂದಕಾಳೂರಿನ ಆಗಿನ ಪ್ರಮುಖ ಬೆಳೆ ಕಡಲೆಕಾಯಿಯೇ ಆಗಿತ್ತು. (ಈಗಿನ ಬೆಂಗಳೂರಿಗರಾದ ನಾವು ಬಿತ್ತುತ್ತಿರುವ ಪ್ರಮುಖ ಬೆಳೆಗಳು - ಶಬ್ದ ಮಾಲಿನ್ಯ, ವಾಯು ಮಾಲಿನ್ಯ, ಜಲ ಮಾಲಿನ್ಯ, ಮೋಸ, ವಂಚನೆ ಇತ್ಯಾದಿ!!) ಹಾಗಾಗಿ ಬೃಹತ್ ಪ್ರಮಾಣದಲ್ಲಿ ಜಾತ್ರೆಯನ್ನು ಆಯೋಜಿಸಿ ಬೇರೆ ಬೇರೆ ನಗರಗಳ, ರಾಜ್ಯಗಳ ವರ್ತಕರು ಬರುವಂತೆ ಮಾಡಿದರು ಕೆಂಪೇಗೌಡ. ಬೇರೆ ಬೇರೆ ಪ್ರದೇಶಗಳಿಂದ ಆಗಮಿಸುತ್ತಿದ್ದ, ವರ್ತಕರು, ಮಾಲೀಕರು, ರೈತರೆಲ್ಲರು ತಮಗೆ ಬೇಕಾದಷ್ಟು ಕಡಲೆಕಾಯಿಯನ್ನು ಕೊಂಡೊಯ್ಯುತ್ತಿದ್ದರು. ಅಲ್ಲದೆ ಅವರಿಗೆ ಇಲ್ಲಿ ಬಗೆ-ಬಗೆಯ ತಳಿಗಳು ಒಂದೇ ಕಡೆ ಲಭಿಸುವಂತಾಯಿತು. ಇಲ್ಲಿ ಮಾರಾಟವಾಗುತ್ತಿದ್ದ ಕಡಲೇಕಾಯಿಗೆ ರಾಜನೇ ಬೆಲೆ ನಿಗದಿ ಪಡಿಸುತ್ತಿದ್ದ. ಎಲ್ಲರ ಬಳಿಯೂ ಒಂದೇ ಬೆಲೆ. ಹಾಗಾಗಿ ಇದು ಎಲ್ಲರಿಗೂ ನಿಷ್ಪಕ್ಷಪಾತವೆನಿಸುತ್ತಿತ್ತು ಮತ್ತು ಎಲ್ಲ ರೈತರಿಗೂ ಅನುಕೂಲವಾಗುತ್ತಿತ್ತು. ಅಲ್ಲದೆ ರೈತನಿಗೇ ನೇರವಾಗಿ ಹಣ ಸಂದಾಯವಾಗುತ್ತಿತ್ತು. ಹಾಗಾಗಿ ರಾಜ್ಯದ ಬೊಕ್ಕಸಕ್ಕೂ ಸುಸಮಯದಲ್ಲಿ ಪೂರಕ ತೆರಿಗೆಯನ್ನು ನೀಡುತ್ತಿದ್ದರು. ಹಾಗಾಗಿ 'ಬೆಂದ'ಕಾಳೂರಾದರೂ ಸಮೃದ್ಧಿಯಿತ್ತು ಎನಿಸುತ್ತ್ತದೆ. ಈ ರೀತಿ ಬೆಳೆದ ಬೆಳೆಯನ್ನು ರೈತರು ಈಗ ತಂದು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ ಅಥವಾ ಪರಿಷೆಯ ಲಾಭಕ್ಕಾಗಿ ಕೊಂಡು ಮಾರುವವರೂ ಇಲ್ಲದಿಲ್ಲ. ನಾವು ಇಂದು ನೋಡುತ್ತಿರುವ ನಿಯಂತ್ರಿತ ಮಾರುಕಟ್ಟೆ ಅಂದಿನ ಅನುಕರಣೆ ಇರಬಹುದೆ. . .!?
ಬಸವನಗುಡಿಯ ಕಡಲೇಕಾಯಿ ಪರಿಷೆ ಜನಸಾಗರ, ಸಾವಿರ ಸಾವಿರಗಟ್ಟಲೆ ಜನಸ್ತೋಮ. ಬಣ್ಣಬಣ್ಣದ ಬಲೂನುಗಳನ್ನು ನೋಡುತ್ತಾ, ಬೆಂಡುಬತ್ತಾಸು ಸವಿಯುತ್ತಾ, ಇಷ್ಟದ ಕಡಲೇಕಾಯಿಯನ್ನು ಪೋಲ್ ಮಾಡ್ತಾ ಸಾಗೋದೇ ಒಂದು ವಿಶಿಷ್ಟ ಅನುಭವ. 'ಸಿಲಿಕಾನ್ ವ್ಯಾಲಿ' ಎಂದು ಹೆಸರು ಪಡೆದುಕೊಂಡಿದ್ರು, ಜಗದ ಎಲ್ಲ ರೀತಿಯ ಜನರು ಬಂದು ನೆಲೆಸಿದ್ರೂ ಕೂಡ ಬಸವನಗುಡಿಯ ಈ ಜನಪದ ನಂಬಿಕೆಯ ಜಾತ್ರೆ ನಮ್ಮನ್ನು ಬೆರಗಾಗಿಸದೇ ಇರದು. ಪ್ರತೀ ವರ್ಷ ಬರುವ ಜನರ ಸಂಖ್ಯೆ ಹೆಚ್ಚುತ್ತಲೇ ಇದೆ ಮತ್ತು ಪರಿಷೆಯ ವಿಸ್ತಾರ ಕೂಡ.
ಯಾವುದೇ ಜಾತ್ರೆಯನ್ನಾದರೂ ಬಿಡಿ-ಬಿಡಿಯಾಗಿ ನೋಡುತ್ತ ಹೋದರೆ ಅಂತಹ ವಿಶೇಷ ಖಂಡಿತ ಕಾಣುವುದಿಲ್ಲ. ನಿತ್ಯ ಬೀದಿಬದಿ ಸಿಗುವ ಕಡಲೇಕಾಯಿ, ಬೆಂಡು ಬತ್ತಾಸುಗಳು, ಸಿಗ್ನಲ್ನಲ್ಲಿ ಮಾರುವ ಅವೇ ಪೀಪಿ ಬಲೂನುಗಳು, ಐಸ್-ಕ್ರೀಂ ಗಾಡಿಗಳು, ಕೀ-ಚೈನು, ಕರವಸ್ತ್ರ, ಕನ್ನಡಕ, ಕೊಳಲು ಮಾರುವವರು, ಜೊತೆಗೆ ಅದೇ ಭೇಲ್ ಪುರಿ, ಉಪ್ಪು-ಖಾರ ಹಚ್ಚಿಟ್ಟ ಮಾವಿನಕಾಯಿ-ಸೌತೇಕಾಯಿಗಳು, ಇನ್ನು ಜಪ್ಪಯ್ಯ ಅಂದರೂ ಸ್ವರವನ್ನು ನೆಟ್ಟಗೆ ಹೊರಡಿಸಲಾಗದ, ಆದರೆ ಮಾರುವವನು ಬಾಯಿಗೆ ತಾಕಿಸಿದ ಕೂಡಲೇ 'ಎಲ್ಲೋ ಅದು ಎಲ್ಲೋ, ಕಿವಿ ತುಂಬೋ ರಾಗ' ಅಂತ ಹಾಡುವ ಮೌತ್ ಆರ್ಗನ್ನು, ಇವುಗಳೇ ಇರುತ್ತವೆ.
ಒಂದೊಂದಾಗಿ ಕಂಡರೆ ಯಾವ ಬಗೆಯ ರೋಮಾಂಚನವನ್ನು ಕೂಡ ಹೊರಡಿಸಲು ಸಾಧ್ಯವಿಲ್ಲದ ಇಂತಹ ವಸ್ತುಗಳೆಲ್ಲ ಒಂದೆಡೆ ಸೇರಿ ನಮ್ಮನ್ನು ಅದಾವುದೋ ಲೋಕಕ್ಕೇ ಕರೆದೊಯ್ದು ಬಿಡುತ್ತವೆ; ಮುಗ್ಧರನ್ನಾಗಿಸಿಬಿಡುತ್ತವೆ. ತಮ್ಮ ತುದಿಗೆ ಉದ್ದನೆಯ ಟೋಪಿ ಸಿಕ್ಕಿಸಿಕೊಂಡ ಪೀಪೀಗಳ ಸದ್ದು, ಕೊಳಲ ಮಾರುವ ಹುಡುಗನ ಅಸಂಬಂದ್ಧ ಊದುವಿಕೆ, ಭೇಲ್ ಪುರಿಯಾತನ ಸೌಟಿನ ಕಟಕಟ, ಅಮ್ಮನ ಹೆಗಲಿನ ಮಗುವಿನ ಅಳು, ಹೊಸ ಆಟಿಕೆಯೊಂದರ/ಮಹಿಳೆಯರ ಗಮನಸೆಳೆಯುವ ಪಾತ್ರೆ ಪರಟೆ, ಓಲೆ, ಸರ ಮುಂತಾದುವುಗಳನ್ನು ಮಾರುವ ಮಾರಾಟಗಾರನ ಕೂಗು, ಮತ್ತೆ ಆ ತಿರುಗುವ ತೊಟ್ಟಿಲ ಕಬ್ಬಿಣದ ಕೀಲಿನ ಕ್ರೀಚ್ಕ್ರೀಚ್, ಆಹಾ! ಎಲ್ಲ ಸೇರಿ ಜಾತ್ರೆಯ ಅದೆಂಥದೋ ವಿಶೇಷ ವಾತಾವರಣ - ಸಾಕಿನ್ನು ಅಲೆದದ್ದು ಅನ್ನಿಸಿ ಹೊರಗೆ ಹೊರಟರೂ, ಮತ್ತೆ ಒಳಕ್ಕೆ ಸೆಳೆಯುವ ಮಾಯಾಬಜಾರು ಈ ಕಡಲೇಕಾಯಿ ಪರಿಷೆ.
ಠಾಕುಠೀಕಾಗಿ ಆಗತಾನೇ ರಿಸಚರ್್ ಲ್ಯಾಬಿಂದ ಹೊರಬಂದಂತೆ ಕಾಣುವವನೂ, ಭವಿಷ್ಯ ಹೇಳುವ ರೋಬೋಟಿನ ಎದುರು, ತನ್ನನ್ನು ತಾನೇ ಒಪ್ಪಿಸಿಕೊಂಡು, ನಗುಮೊಗದಿಂದ ತನ್ನ - ಈ ಮೊದಲೇ ಸ್ಟೋರಾಗಿರುವ ಭವಿತವ್ಯವನ್ನು ಕೇಳುತ್ತಿರುತ್ತಾನೆ! ಪಿವಿಆರ್ ಬಿಟ್ಟು ಬೇರೆಲ್ಲಾದರೂ ಸಿನಿಮಾ ನೋಡಿದರೆ ಸಮಾಧಾನವಾಗದವನೂ, ಇಲ್ಲಿನ ಜನಜಂಗಳಿ ತುಂಬಿದ ಸಣ್ಣ ಪೆಟ್ಟಿಗೆಗೆ ಕಣ್ಣುಕೀಲಿಸಿ ಆಹಾ ಅಂತ ಮಜಾ ಅನುಭವಿಸುತ್ತಾನೆ. ಹೈಜಿನಿಕ್ ಎಂದು ಗುನುಗುವ ಲಲನಾಮಣಿಯರೂ ಕೂಡ ಜುಮ್ಮೆಂದು ಹಾಯಾಗಿ ಹಾರಾಡುತ್ತಾ ಪೇಪರ್ ಮಿಠಾಯಿ, ಕರಿದ ತಿಂಡಿ, ಐಸ್ಕ್ಯಾಂಡಿಗಳನ್ನು ಸವಿಯುತ್ತಾರೆ.
ಇನ್ನು ಅಪ್ಪಅಮ್ಮನ ಜೊತೆಗೆ ಬಂದ ಮಕ್ಕಳನ್ನಂತೂ ಬಿಡಿ. ಸಿಕ್ಕರೆ ಇಡೀ ಜಾತ್ರೆಯನ್ನೇ ಖರೀದಿಸುವ ಹವಣಿಕೆ ಅವರದು. ಗಲಾಟೆ ಮಾಡಿ ಗುದ್ದಿದರೆ ಗುದ್ದಿಸಿಕೊಂಡು, ಬೈದರೆ ಬೈಸಿಕೊಂಡು ಝಗಮಗ ಅನ್ನಿಸುವ ಆಟಿಕೆಯನ್ನ ಕೊಡಿಸಿಕೊಳ್ಳದೇ ಇರಲಾರವು. ಮಕ್ಕಳ ಗಮನ ಸೆಳೆಯಲೆಂದೇ ಕೂತಲ್ಲೇ ಡಗಡಗ ಅನ್ನುವ ಪುಟ್ಟ ಬೈಕುಗಳೂ, ತಿರುಗುವ ಕುದುರೆಗಾಡಿಗಳು, ಡಮರುಗಗಳೂ, ಪೀಪಿಗಳು ಸಾಮಾನ್ಯ.
ಬಸವನಗುಡಿಯ ಈ ಜಾತ್ರೆಯಲ್ಲಿ ಬಡವರ ಬಾದಾಮಿ, ಗಾಂಧೀತಾತನ ಅಚ್ಚುಮೆಚ್ಚಿನ ಕಡಲೆಕಾಯಿ ಮತ್ತು ಅದರ ಖಾದ್ಯಗಳಿಗೆ ಹೆಚ್ಚು ಬೇಡಿಕೆ. ಬಗೆ ಬಗೆಯ ಕಡಲೆಕಾಯಿಗಳು, ಹಸಿಯಾದದ್ದು, ಹುರಿದದ್ದು, ಸುಟ್ಟದ್ದು, ಬೇಯಿಸಿದ್ದು ಹೀಗೆ ವಿವಿಧ ಸ್ವಾದವನ್ನು ಒಂದೇ ಸೂರಿನಡಿ ಸವಿಯಬಹುದು. ಕಡಲೆಕಾಯಿಯ ಉಸಳಿ, ಶೇಂಗಾದೊಂದಿಗೆ ಗಟ್ಟಿಕಡಲೆಕಾಳು ಸೇರಿಸಿ ಬಾಯಿಚಪ್ಪರಿಕೆ ಬರುವ ಗುಗ್ಗುರಿ, ಮಸಾಲೆ ಶೇಂಗಾಕಾಳು, ಬೋಂಡಾ ಹೀಗೆ ಹತ್ತು ಹಲವು ಬಗೆಯ ಖಾದ್ಯಗಳು ಲಭ್ಯ. ಜೊತೆಗೆ ಶೇಂಗಾ ಹೋಳಿಗೆಯ ರುಚಿಯನ್ನೂ ಸವಿಯಬಹುದು.
ದೇವರಿಗೆ ವರ್ಷಕ್ಕೊಮ್ಮೆ ಮಹೋತ್ಸವವಾಗುವಾಗಲೇ ಜೋರಿನ ಜಾತ್ರೆಯೂ ಜನರ ಖುಷಿಗಾಗಿ. ವರುಷಕ್ಕೊಮ್ಮೆ ಜಾತ್ರೆಗಳೇ ಮನರಂಜನೆಯ ಮೂಲ. ಇವು ಅರ್ಥಪೂರ್ಣವೂ ಹೌದು. ತೇರೆಳೆವುದರ ಜೊತೆಗೆ ಮನದೇರು (ಮನದ ತೇರು) ಉಲ್ಲಸಿತವಾಗಲು ಇಂತಹ ಪರಿಷೆಗಳು, ಜಾತ್ರೆಗಳು ಸಹಕರಿಸುತ್ತವೆ. ಯಕ್ಷಗಾನ, ನಾಟಕಗಳು ರಾತ್ರಿಯಿಡೀ ಜರುಗುವುದನ್ನು ಈಗಲೂ ನಾವೂ ಗ್ರಾಮೀಣ ಪ್ರದೇಶದಲ್ಲಿ ನೋಡಬಹುದು. ಆದರೆ ಜನರ ಪಾಲ್ಗೊಳ್ಳುವಿಕೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಇದಕ್ಕೆ ನಮ್ಮ ತಾಂತ್ರಿಕತೆ, ದೃಶ್ಯಮಾಧ್ಯಮ ಮತ್ತು ನಾವು ಅದಕ್ಕೆ ಮಾರುಹೋಗುತ್ತಿರುವುದು ಅತ್ಯಂತ ವಿಷಾದನೀಯ.
ಬೆಂಗಳೂರಿನ ಕಡಲೇಕಾಯಿ ಪರಿಷೆಗೆ ಬರುವ ಜನ ವರುಷ ವರುಷಕ್ಕೆ ಹೆಚ್ಚುತ್ತಿದ್ದಾರೆ. ಪ್ರತೀವರ್ಷವೂ ಪ್ರತೀದಿನವೂ ಬೇರೆಬೇರೆ ಬಗೆಯಲ್ಲಿ ಕಾಣುವುದೇ ಈ ಪರಿಷೆಯ ವಿಶೇಷ. ಮರೆತೇ ಹೋಗಿಬಿಡಬಹುದಾದ ಯಾವುದೋ ನೆನಪೊಂದು ಈ ಪರಿಷೆಯಲ್ಲಿ ಪುನರುಜ್ಜೀವನ ಪಡೆಯುತ್ತದೆ. ಒಮ್ಮೆ ಪ್ರಯತ್ನಿಸಿ ನೋಡಿ.....
ಬನ್ನಿ ಗುನುಗುತ್ತಾ ಮೆಲ್ಲೋಣ
ಕಡ್ಸೇಕಾಯ್, ಕಡ್ಲೇಕಾಯ್,
ತಾಜಾ ತಾಜಾ ಕಳ್ಳೇಕಾಯ್, ಗರಮಾ ಗರಂ ಕಳ್ಳೇಕಾಯ್,
ಬಡವರ ಬಾದಾಮಿ ಕಳ್ಳೇಕಾಯ್, . . . .
No comments:
Post a Comment