Sunday, 27 November 2011

ಮಾಸದ ವ್ಯಕ್ತಿ


ಹೂವು ಹೊರಳುವವು ಸೂರ್ಯನ ಕಡೆಗೆ
ನಮ್ಮದಾರಿ ಬರಿ ಚಂದ್ರನವರೆಗೆ
ಇರುಳಿನ ಒಡಲಿಗೆ, ದೂರದ ಕಡಲಿಗೆ
ಮುಳುಗಿದಂತೆ ದಿನ ಬೆಳಗಿದಂತೆ
ಹೊರಬರುವನು ಕೂಸಿನ ಹಾಗೆ

ಕನ್ನಡದ ಸುಪ್ರಸಿದ್ಧ ಹಾಗೂ ಜನಪ್ರಿಯ ಕವಿಗಳಲ್ಲಿ ಒಬ್ಬರಾಗಿ, ಆಡಳಿತಾತ್ಮಕ ದಕ್ಷತೆ ಮತ್ತು ದೂರದೃಷ್ಟಿ ಹಾಗೂ ಸಾಹಿತ್ಯಕ ಸೃಜನಶೀಲತೆ ಮತ್ತು ಸಹೃದಯತೆಯ ಸಂಗಮವಾಗಿರುವ, ಕಾವ್ಯೋಪಾಸನೆಯ ವ್ರತಸ್ಥ ಚೇತನ; ಯುವ ಮನಸ್ಸಿನ ಕುತೂಹಲ ಮತ್ತು ಅನ್ವೇಷಣಗಳು ಸೌಂದರ್ಯನಿಷ್ಠ ಸ್ಪಂದನಗಳೊಂದಿಗೆ ಚಿಂತನಶೀಲ ವಿವೇಚನಾ ಶಕ್ತಿಯನ್ನು ಮೈಗೂಡಿಸಿಕೊಂಡು, ಪ್ರಕೃತಿ ಪ್ರೇಮವನ್ನೂ ಜಾಗೃತವಾಗಿರಿಸಿಕೊಂಡು ಬದುಕಿನ ವಿವಿಧ ಸ್ತರಗಳನ್ನು ಅವಲೋಕಿಸುತ್ತ ಹಾಗೂ ಅನುಭವಿಸುತ್ತ ಕಾವ್ಯಶಿಲ್ಪದಲ್ಲಿ ಒಂದು ಪರಿಣಿತಿಯ ಹಂತಕ್ಕೆ ಬಂದ, ಯುಗಯುಗಾಂತ್ಯದವರೆಗೆ ಜಗವ ಬೆಳಗಿಸಬಲ್ಲ ಚಿರಂತನ ಚೆನ್ ಬೆಳಕನ್ನು ಕಂಡ ಕವಿ ಶ್ರೀ ಚೆನ್ನವೀರಕಣವಿ

1928 ಜೂನ್ 28 ರಂದು ಗದಗಿನ ಹೊಂಬಳದಲ್ಲಿ ಪಾರ್ವತಮ್ಮ ಮತ್ತು ಸಕ್ರೆಪ್ಪನವರ ಕಿರಿಯ ಮಗನಾಗಿ ಕಣವಿಯವರ ಜನನ. ಕಿರಿಯ ಮಗನಾಗಿ ಜನಿಸಿದ ಇವರಿಗೆ ಇಟ್ಟ ಹೆಸರು 'ಚೆನ್ನವೀರ' ಎಂಬುದು. ಇದು ಸಕ್ರೆಪ್ಪ ಮಾಸ್ತರರ ದೀಕ್ಷಾಗುರುಗಳ ಹೆಸರು. ಕಣವಿಯವರ ತಂದೆ ಸಕ್ರೆಪ್ಪನವರು ಶಿರುಂದದಲ್ಲಿ ಶಾಲಾ ಶಿಕ್ಷಕರಾಗಿದ್ದರು. ಆ ಕಾಲದಲ್ಲಿ ಅದು ಅತ್ಯಂತ ಗೌರವಾನ್ವಿತವಾದ ವೃತ್ತಿ. ಕಣವಿ ಸಕ್ರೆಪ್ಪ ಮಾಸ್ತರರು ಪ್ರಭಾವೀ ಶಿಕ್ಷಕರು. ಜೊತೆಗೆ ಧ್ಯಾನ, ಪ್ರಾರ್ಥನೆಗಳಂಥ ಆಧ್ಯಾತ್ಮಿಕ ಸಾಧನೆಯಲ್ಲಿಯೂ ಅವರು ತೊಡಗಿದವರು. ಕಣವಿಯವರು ತಮ್ಮ ಶೈಶವ ಮತ್ತು ಬಾಲ್ಯಗಳನ್ನು ಕಳೆದದ್ದು ಶಿರುಂದದಲ್ಲಿ; ಅದು ಒಂದು ಸಣ್ಣಹಳ್ಳಿ. ಓರಗೆಯ ಬಾಲಕರೊಂದಿಗೆ ಬೆರೆತು ಗುಂಡು, ಚೆಂಡು, ಬುಗುರಿ  ಮೊದಲಾದ ಆಟಗಳನ್ನು ಆಡುತ್ತಿದ್ದ ಕಣವಿಯವರಿಗೆ ಅಲ್ಲಿಯ ಪರಿಸರ ಕುತೂಹಲವನ್ನು ಕೆರಳಿಸುತ್ತ, ಮನಸ್ಸನ್ನು ಉಲ್ಲಸಿತಗೊಳಿಸುತ್ತ, ಅವರ ಸೃಜನಶೀಲ ಶಕ್ತಿಯನ್ನು  ಜಾಗೃತಗೊಳಿಸುತ್ತ, ವಿಲಕ್ಷಣವಾದ  ಹೊಳಹುಗಳನ್ನು ಒಳಗೊಳಗೆ ಮೂಡಿಸುತ್ತ ಬೆಳಿಸಿತು. ಕಮ್ಮಾರ ಮಾನಪ್ಪನ ಕೆಂಗುಲಿಮೆ, ಕುಂಬಾರ ಮಲ್ಲಣ್ಣನ ತಿಗುರಿ ಅವರನ್ನು ಬೆರಗುಗೊಳಿಸುತ್ತಲೇ, ಹೊಸ ಸೃಷ್ಟಿಯ ಕ್ರಿಯಾತ್ಮಕ ಸಂವೇದನೆಗಳನ್ನು ನೀಡಿವೆ. ಕಣವಿಯವರು ಈ ಬಾಲ್ಯದ ದಿನಗಳಲ್ಲಿಯೇ ಆಟ, ಬಯಲಾಟ ಕಂಡಿದ್ದಾರೆ, ಕೋಲುಕುಣಿತ ನೋಡಿದ್ದಾರೆ. ಹಂತಿ (ಧಾನ್ಯಗಳನ್ನು ಒಕ್ಕುವಾಗ ಕಟ್ಟುವ ದನಗಳ ಸಾಲು)  ತಿರುಗುವುದನ್ನು
ವೀಕ್ಷಿಸಿದ್ದಾರೆ. ಜೊತೆಗೆ ಹಂತಿ ಹಾಡುಗಳನ್ನು ಕೇಳಿದ್ದಾರೆ. ದಿನಾ ಬೆಳಗು ಬೀಸುಕಲ್ಲಿನ ನಾದವನ್ನೂ, ಜೊತೆಗೆ ಹಾಡುಗಳನ್ನೂ ಕಿವಿಗೊಟ್ಟು ಕೇಳಿದ್ದಾರೆ. ಲಂಬಾಣಿ ಹೆಂಗಸರ ಬಣ್ಣ ಬಣ್ಣದ ಉಡುಪುಗಳನ್ನು ಬೆರಗುಗಣ್ಣುಗಳಿಂದ ನೋಡಿದ್ದಾರೆ. ಅವರ ಹಾಡು-ಕುಣಿತ ನೋಡುವುದರ ಜೊತೆಗೆ ಲಂಬಾಣಿ ಗಿಲ್ ಗಿಲ್ .... ನಾ ಬಂದೆ ನಿಲ್ ನಿಲ್, ಕಟಗಿ ಹೊರಿ ಚೆಲ್-ಚೆಲ್ ಎಂದು ಅಣಕವಾಡು ಕಟ್ಟಿ, ತಾವೂ ಕುಣಿದು, ಆನಂದಪಟ್ಟಿದ್ದಾರೆ. 

ಎಲೆವಳ್ಳಿ ತೋಟ, ಜೋಳದ ಪೈರು, ಕೊಲ್ಲಾರಿ ಚಕ್ಕಡಿ, ಗಿರಕು ಗಿರಕೂ ಎಂದು ಸದ್ದು ಮಾಡುವ ಏತದ ಬಾವಿ - ಇವೆಲ್ಲವನ್ನೂ ಕುತೂಹಲದಿಂದಲೇ ಕಣವಿ ಕಂಡಿದ್ದಾರೆ. ಅಷ್ಟಲ್ಲದೆ ಮನದಣಿಯೆ ಆ ಬಾವಿಯಲ್ಲಿ ಈಜಾಡಿದ್ದಾರೆ. ಜೊತೆಗೆ ಪ್ರಕೃತಿಯ ಆಕರ್ಷಣೆಗೆ ಅವರು ಒಳಗಾಗಿದ್ದು, ಮಾನವ ಹೃದಯದ ಸೂಕ್ಷ್ಮ ಕಂಪನಗಳನ್ನು ಅನುಭವಿಸಿದ್ದು, ತಂದೆ ತುಸು ಸಿಡುಕಾಡಿದಾಗ ತಾಯಿಯ ಆಸರೆ ಪಡೆದದ್ದು, ಅಕ್ಕ-ಅಣ್ಣಂದಿರೊಂದಿಗೆ ಬೆರೆತು ಹಾಗೂ ಚಿಕ್ಕ ಗೆಳೆಯರೊಂದಿಗೆ ಕೂಡಿ ತನ್ನ ತಾ ಮರೆತದ್ದು  ಇವು ಅವರ ಭಾವದ ವಿಶಿಷ್ಟ ಸ್ಪಂದನಗಳು ಹಾಗೂ  ಉಕ್ಕಂದ (ಉತ್ಸಾಹ, ಹುರುಪು). ಓದು ಬರೆಹದಲ್ಲಿ ಅವರಿಗೆ ತಂದೆಯೇ, ಮಾದರಿ. ಅವರ ಬರವಣಿಗೆಯ ಶಿಸ್ತು ತಂದೆಯಿಂದ ಬಳವಳಿಯಾಗಿಯೇ ಬಂದದ್ದು ಮಾಸ್ತರನ ಮಗನೆಂಬ ಯಾವ ವಿನಾಯತಿಗೂ ಒಳಗಾಗದೆ, ಎಲ್ಲ ಬಾಲಕರೊಂದಿಗೆ ಸಮಾನವಾಗಿ ಬೆಳೆಯುತ್ತಿದ್ದರೂ, ಆಗ ಹಳ್ಳಿಯ ಜನ ಪ್ರೀತಿ-ಗೌರವಗಳಿಂದ 'ಸಣಮಾಸ್ತರ' ಎಂದು ಗುರುತಿಸುತ್ತಿದ್ದರೆ ಅದರಲ್ಲಿ ಆಶ್ಚರ್ಯಪಡುವಂತಹದೇನೂ ಇಲ್ಲ. ಅಷ್ಟಲ್ಲದೆ ಓದಿನಲ್ಲಿ ಅವರು ಎಲ್ಲರಿಗಿಂತ  ಮುಂದಿದ್ದರು. ಶಾಲಾ ಮಕ್ಕಳಿಗಾಗಿ ಏರ್ಪಡಿಸುತ್ತಿದ್ದ ಸ್ಪಧರ್ೆಗಳಲ್ಲೂ  ಅವರು ಪ್ರಥಮ ಸ್ಥಾನ ಪಡೆಯುತ್ತ 'ಜಾಣ ವಿದ್ಯಾರ್ಥಿ'  ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು. 1, 2, 3, 4 ತರಗತಿಗಳು ನೋಡುನೋಡುತ್ತಲೇ ಮುಗಿದುಬಿಟ್ಟವು. ಸಕ್ರೆಪ್ಪ ಮಾಸ್ತರರು ಈ ಹೊತ್ತಿಗೆ ನಿವೃತ್ತರಾದರು. ಈ ಸಂದರ್ಭದಲ್ಲಿ ಶಿರುಂದ ಬಿಡುವುದೇ ಸೂಕ್ತವಾಗಿ ತೋರಿತು. ಅವರ ಪತ್ನಿಯ ತವರೂರಾದ ಹೊಂಬಳಕ್ಕೆ ಬಂದು ನೆಲೆಸಿದರು. 

ಕಣವಿಯವರ ವಿದ್ಯಾಭ್ಯಾಸ ಮುಂದುವರಿಯಲು ಅಕ್ಕನ ಮನೆಯ ಆಶ್ರಯ ದೊರಕಿತು. ಕಣವಿಯವರ ಮಾವನವರಾದ ಶ್ರೀ ಚ. ಅ. ಗೋಗೇರಿ ಅವರು ಆಗ ಧಾರವಾಡದ ಹತ್ತಿರದ ಗರಗಿನಲ್ಲಿ ಮುಖ್ಯಾಧ್ಯಾಪಕರಾಗಿದ್ದರು. ಅವರು ಸಾಮಾನ್ಯ ಶಿಕ್ಷಕರೇನೂ ಆಗಿರಲಿಲ್ಲ. ಆ ಕಾಲದ ಮಾದರಿಯ ಶಿಕ್ಷಕರಾಗಿದ್ದರು. ಗಾಂಧೀತತ್ವ ಪ್ರಣಿತ ಶಿಕ್ಷಣ ಕೇಂದ್ರವಾಗಿದ್ದ ವಧರ್ಾದಲ್ಲಿ ತರಬೇತಿ ಪಡೆದವರಲ್ಲಿ ಚ.ಅ. ಗೋಗೇರಿಯವರೂ ಒಬ್ಬರಾಗಿದ್ದರು. ಅವರ ನೇತೃತ್ವದಲ್ಲಿ ಗರಗ ಶಾಲೆ ಧಾರವಾಡ ಜಿಲ್ಲೆಯಲ್ಲಿಯೇ ಎದ್ದು ಕಾಣುವಂಥ ಮಾದರಿ ಶಾಲೆಯಾಗಿತ್ತು. 1938 ರಲ್ಲಿ ಚೆನ್ನವೀರ ಕಣವಿಯವರು ಈ ಶಾಲೆಯ ಆರನೆಯ ತರಗತಿಯ ವಿದ್ಯಾರ್ಥಿಯಾಗಿ ಪ್ರವೇಶ ಪಡೆದರು. 

ಗರಗವೂ ಒಂದು ಹಳ್ಳಿಯೇ. ಆದರೆ ಶಿರುಂದದಷ್ಟು ಚಿಕ್ಕದೂ ಅಲ್ಲ. ಅಜ್ಞಾತವಾದುದೂ ಅಲ್ಲ. ಅನುಭಾವಿಯಾಗಿ ಪ್ರಭಾವ ಬೀರಿದ್ದ ಗರಗದ ಮಡಿವಾಳಪ್ಪನವರಿಂದ ಅದು ತನ್ನ ಖ್ಯಾತಿಯನ್ನು ಪಡೆದಿತ್ತು. ಅವರ ಗದ್ದುಗೆ ಮಠ ಈಗ ಒಂದು ಪುಣ್ಯಕ್ಷೇತ್ರವಾಗಿದೆ. ಶಿರುಂದದಲ್ಲಿ ಹಂತಿ ಹಾಡುಗಳನ್ನು, ಗರತಿಯರ ಹಾಡುಗಳನ್ನು ಕೇಳಿದ ಚೆನ್ನವೀರ, ಇಲ್ಲಿ ಅನುಭಾವ ಗೀತೆಗಳನ್ನೂ ದೇಶಭಕ್ತಿ ಗೀತೆಗಳನ್ನೂ ಕೇಳುವಂತಾಯಿತು. ಹಾಗೆ ನೋಡಿದರೆ ಅನುಭಾವ ಗೀತೆಗಳನ್ನು ಕೇಳುವುದು ಕಣವಿಯವರಿಗೆ ತೀರ ಹೊಸದೇನೂ ಆಗಿರಲಿಲ್ಲ. ಅವರ ತಂದೆಯವರಿಂದ ಅವರು ಆಗಲೇ ಅವುಗಳನ್ನು ಕೇಳಿದ್ದರು. ಗರಗ ಗ್ರಾಮ ಭಾರತದ ರಾಷ್ಟ್ರಧ್ವಜವನ್ನು ತಯಾರಿಸುವ ಅತ್ಯಂತ ಪ್ರತಿಷ್ಠಿತ ಊರು ಕೂಡ ಆಗಿತ್ತು. 

ಕಣವಿಯವರು ತಮ್ಮ ತಂದೆಯವರ ಪ್ರಭಾವಲಯದಲ್ಲಿ ರೂಢಿಸಿಕೊಂಡಿದ್ದ ಗುಣಗಳಿಗೆಲ್ಲ ವಿಕಾಸಹೊಂದಲು ಇಲ್ಲಿ ಅವಕಾಶಗಳಿದ್ದವು. ಸ್ವಾತಂತ್ರದ ಗಾಳಿ ಬಲವಾಗಿ ಬೀಸುತ್ತಿದ್ದ ಆ ಕಾಲದಲ್ಲಿ ಪ್ರತಿ ರವಿವಾರ ಪ್ರಭಾತಫೇರಿ ನಡೆಯುತ್ತಿತ್ತು. ದೇಶಭಕ್ತಿಯ, ನಾಡಭಕ್ತಿಯ ಗೀತಗಳನ್ನು ಶಾಲಾ ವಿದ್ಯಾರ್ಥಿಗಳು ಹಾಡುತ್ತಿದ್ದರು. ಬಹುಬೇಗನೇ ಈ ಪ್ರಭಾತಫೇರಿಯ ಹಾಡುಗಾರಿಕೆಯಲ್ಲಿ ಕಣವಿಯವರು ಮುಂಚೂಣಿಗೆ ಬಂದರು. 'ಝಂಡಾ ಊಂಚಾ ರಹೇ ಹಮಾರಾ', ಕರುನಾಡು ನಮ್ಮ ನಾಡು, ಚಿನ್ನದಾ ರನ್ನದಾ ಕರುನಾಡು ನಮ್ಮ ನಾಡು' ಇಂಥ ಹಾಡುಗಳನ್ನು ಅತ್ಯಂತ ಉತ್ಸಾಹದಿಂದ ಕಣವಿಯವರು ಹಾಡುತ್ತಿದ್ದರು. ಸಾರ್ವಜನಿಕರಲ್ಲಿ ರಾಷ್ಟ್ರೀಯ ಪ್ರಜ್ಞೆ ಮೂಡಿಸುವ, ಭಾರತ ಸ್ವಾತಂತ್ರ್ಯದ ಅವಶ್ಯಕತೆಯನ್ನು ಬಿಂಬಿಸುವ ಮುಖಂಡರ ಭಾಷಣಗಳೂ ಆಗಾಗ ಗರಗದಲ್ಲಿ ನಡೆಯುತ್ತಿದ್ದವು. ಶಾಲೆಗೂ ರಾಷ್ಟ್ರೀಯ ಮುಂದಾಳುಗಳು ಆಗಮಿಸಿ ಮಕ್ಕಳಿಗೆ ಸಂದೇಶ ನೀಡುತ್ತಿದ್ದರು. 

ಕಣವಿಯವರ ಓದುವ ಹವ್ಯಾಸಕ್ಕೆ ಚಾಲನೆ ದೊರೆತದ್ದು ಗರಗ ಶಾಲೆಯಲ್ಲಿಯೇ. ಅಲ್ಲಿ ಒಂದು ಪುಟ್ಟ ಗ್ರಂಥಾಲಯವಿತ್ತು. ಒಂದು ಕಪಾಟಿನಲ್ಲಿ ಪುಸ್ತಕಗಳನ್ನಿಟ್ಟಿದ್ದರು. ಕಣವಿಯವರಿಗೆ ಆ ಕಪಾಟಿನಲ್ಲಿ ಗಳಗನಾಥರ ಮಾಧವ ಕರುಣಾವಿಲಾಸ ಕಾದಂಬರಿ ದೊರಕಿತು. ಅದು ಪುಟ್ಟ ಕಾದಂಬರಿಯೇನಲ್ಲ. ಆದರೂ ಆಸಕ್ತಿಯಿಂದ ಅದನ್ನು ಓದಲು ತೊಡಗಿದರು. ಅದು ಅಯಸ್ಕಾಂತದಂತೆ ಅವರನ್ನು ಹಿಡಿದುಕೊಂಡಿತು. ಒಂದಿಷ್ಟೂ ಬಿಡದೆ ಓದಿದರು. ಅಮಿತವಾದ ಆನಂದವನ್ನು ಅನುಭವಿಸಿದರು. ಓದಿನ ರುಚಿ ಹತ್ತಿದ್ದು ಇಲ್ಲಿಂದಲೇ. 

ಆ ಕಾಲದಲ್ಲಿ ಪ್ರಾಥಮಿಕ ಶಿಕ್ಷಣದ ಕೊನೆಯ ತರಗತಿಗಳು ಹೆಚ್ಚು ಪರಿಶ್ರಮವನ್ನು ಬಯಸುತ್ತಿದ್ದವು. ಏಳನೆಯ ತರಗತಿಯ ಅಧ್ಯಯನವಂತೂ ನಿದ್ರೆ ಕೆಡಿಸುವಂತಹದು. ಮುಲ್ಕೀ ಪರೀಕ್ಷೆ (ಪ್ರಾಥಮಿಕ ಶಿಕ್ಷಣದ ಕೊನೆಯ ಪರೀಕ್ಷೆ) ಒಂದು ಸ್ಪರ್ಧಾತ್ಮಕವಾದ ಪರೀಕ್ಷೆ. ಅಧ್ಯಾಪಕರು ಈ ಪರೀಕ್ಷೆಗೆ ತಮ್ಮ ವಿದ್ಯಾರ್ಥಿಗಳನ್ನು ವಿಶೇಷ ಆಸ್ಥೆಯಿಂದ ತರಬೇತುಗೊಳಿಸುತ್ತಿದ್ದರು. ಅದರಲ್ಲೂ ತಮ್ಮ ಶಾಲೆಗೆ ಕೀರ್ತಿ ತರುವಂತಹ ಜಾಣ ವಿದ್ಯಾರ್ಥಿಗಳನ್ನು ಗುರುತಿಸಿ, ಹೆಚ್ಚು ಮುತುವರ್ಜಿವಹಿಸಿ, ಅವರ ಅಧ್ಯಯನದ ಪ್ರತಿಯೊಂದು ಹಂತವನ್ನೂ ಲಕ್ಷ್ಯಪೂರ್ವಕವಾಗಿ ಗಮನಿಸುತ್ತಿದ್ದರು. ಚೆನ್ನವೀರ ಕಣವಿಯವರ ಸಾಧನೆಯ ಬಗ್ಗೆ ಭರವಸೆಹೊಂದಿದ್ದ ಅಧ್ಯಾಪಕರು ಅವರನ್ನು ಹೆಚ್ಚು ದುಡಿಸಿದರೆಂದು ಹೇಳಬಹುದು. ತಮ್ಮ ಅಧ್ಯಾಪಕರ ಭರವಸೆ ಹುಸಿಯಾಗದಂತೆ, 1940 ರಲ್ಲಿ ನಡೆದ ಮುಲ್ಕೀ ಪರೀಕ್ಷೆಯಲ್ಲಿ ಧಾರವಾಡ ಜಿಲ್ಲೆಗೇ ಪ್ರಥಮ ಸ್ಥಾನ ಪಡೆದು ಅಧ್ಯಾಪಕರ ಪ್ರಶಂಸೆಗೆ ಪಾತ್ರರಾದರು. ಗರಗ ಶಾಲೆಗೆ ಕೀರ್ತಿಯನ್ನು ತಂದುಕೊಟ್ಟರು. 

ಕಣವಿಯವರ ಶಿಕ್ಷಣದ ಮುಂದುವರಿಕೆಗೆ ಅಂಥ ಅಡೆ-ತಡೆಗಳೇನೂ ಇರಲಿಲ್ಲ. ಮುಲ್ಕೀ ಪರೀಕ್ಷೆಯ ಪ್ರಥಮ ಸ್ಥಾನ ಅವರ ಸಾಧನೆಗೆ ಮೆರುಗು ತಂದುಕೊಟ್ಟಿತ್ತು. ಅಷ್ಟಲ್ಲದೆ ಅವರು ಮುಂಬಯಿ ಸರಕಾರದ ಪ್ರತಿಭಾ ಪುರಸ್ಕಾರಕ್ಕೂ ಅರ್ಹರಾಗಿದ್ದರು. ಇಂಥ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪರಮಪೂಜ್ಯ ಶ್ರೀ ಮೃತ್ಯುಂಜಯ ಸ್ವಾಮಿಗಳ ಮುರಘಾಮಠದ ಉಚಿತ ಪ್ರಸಾದನಿಲಯ ಆಶ್ರಯದ ತಾಣವಾಗಿತ್ತು. 

ಧಾರವಾಡದ ರಾಜಾ ಲಖಮಗೌಡ ಸರದೇಸಾಯಿ (ಆರ್.ಎಲ್.ಎಸ್.) ಹೈಸ್ಕೂಲು ಕೂಡ ಈ ಪ್ರತಿಭಾವಂತ ವಿದ್ಯಾಥರ್ಿಯನ್ನು ಆತ್ಮೀಯವಾಗಿಯೇ ಸ್ವಾಗತಿಸಿತು. ಆಗ ಅಲ್ಲಿ ಗಾಂಧೀಜಿಯವರ ಆದರ್ಶಗಳನ್ನು ಸ್ವೀಕರಿಸಿದ ಖಾದಿಧಾರಿ, ಅಪ್ಪಟ ಕನ್ನಡಿಗ (ಧೋತಿ, ಕೋಟು, ರುಮಾಲು ಉಳ್ಳ), ಬಸವತತ್ತ್ವದ ಅನುಯಾಯಿ, ಎಂ.ಎ.ಬಿ.ಟಿ ಪದವೀಧರ ಶ್ರೀ ವೀ.ರು. ಕೊಪ್ಪಳ ಮುಖ್ಯಾಧ್ಯಾಪಕರಾಗಿದ್ದರು. ಅವರು ಕನ್ನಡ ಸಾಹಿತ್ಯದಲ್ಲಿ ವಿದ್ವಾಂಸರೂ ಆಗಿದ್ದರು.

ಕಣವಿಯವರು ವಸತಿ ಸೌಕರ್ಯ ಪಡೆದದ್ದು ಶ್ರೀ ಮೃತ್ಯುಂಜಯ ಸ್ವಾಮಿಗಳ ಆಧ್ಯಾತ್ಮಿಕ, ಸಾಂಸ್ಕೃತಿಕ  ಪರಿಸರದಲ್ಲಿ ; ಅಧ್ಯಯನಕ್ಕೆ ಅವಕಾಶ ಪಡೆದದ್ದು ಶ್ರೀ ವೀ.ರು. ಕೊಪ್ಪಳ ಅವರಂಥ ಆದರ್ಶ ಶಿಕ್ಷಕರ ಶೈಕ್ಷಣಿಕ ವಾತಾವರಣದಲ್ಲಿ. ಕಣವಿಯವರು ಅಧ್ಯಯನಶೀಲರಾಗಿ ಸಂಸ್ಕೃತಿ ಸಂಪನ್ನ ವ್ಯಕ್ತಿಯಾಗಿ ಬೆಳೆಯಲು ಅನುಕೂಲವಾದ ವಾತಾವರಣ ಆಗ ಧಾರವಾಡದಲ್ಲಿ ವಿಶೇಷವಾಗಿಯೇ ಇತ್ತು. 

ಹೈಸ್ಕೂಲಿನ ವಿದ್ಯಾಭ್ಯಾಸ ಅವರ ಬೆಳವಣಿಗೆಗೆ ನೀರೆರೆಯುತ್ತಿರುವಂತೆ ಕಾವ್ಯದ ಅಧ್ಯಯನಕ್ಕೆ ತೆರೆದ ಬಾಗಿಲಾಗತೊಡಗಿತು. ಈ ಹೈಸ್ಕೂಲಿನ ಗ್ರಂಥಾಲಯದಿಂದ ಬೇಂದ್ರೆಯವರ 'ಗರಿ', ಮಧುರಚೆನ್ನರ 'ನನ್ನ ನಲ್ಲ', ಕುವೆಂಪು ಅವರ 'ನವಿಲು', ಕಡೆಂಗೋಡ್ಲು ಶಂಕರಭಟ್ಟರ 'ನಲ್ಮೆ' ಮೊದಲಾದ ಕವನ ಸಂಕಲನಗಳನ್ನು ಓದಿದರು. ಕಣವಿಯವರ ಹೃದಯದಲ್ಲಿದ್ದ ಕವಿತ್ವದ ಬೀಜ ಅಂಕುರಗೊಳ್ಳಲು ಇವೆಲ್ಲ ಪೋಷಕ ದ್ರವ್ಯಗಳಾದವು. ಗರಿ, ನನ್ನ ನಲ್ಲ, ನವಿಲು ಇತ್ಯಾದಿ ಸಂಕಲನದ ಹಲವು ಕವಿತೆಗಳು ಕಣವಿಯವರ ನಾಲಗೆಯ ಮೇಲೆ ಕುಣಿಯತೊಡಗಿದವು. ಆ ಮಾದರಿಗಳಲ್ಲಿ ಕಾವ್ಯ ನಿರ್ಮಿತಿಮಾಡುವ ಲವಲವಿಕೆಯನ್ನು ಅವರಲ್ಲಿ ಹುಟ್ಟಿಸಿದವು. ಸ್ವಲ್ಪ ದಿನಗಳಲ್ಲಿಯೇ ಅವರೊಂದು ಕವಿತೆ ಬರೆದರು. ಅದರ ಹೆಸರು 'ಸೃಷ್ಟಿಯ ಸೊಬಗು'.  ಈ ಕವಿತೆ ಹೈಸ್ಕೂಲಿನ ವಾರ್ಷಿಕ ಪತ್ರಿಕೆಯಲ್ಲಿ ಪ್ರಕಟವೂ ಆಯಿತು. ಇದನ್ನೋದಿದ ಮುಖ್ಯಾಧ್ಯಾಪಕ ವೀ.ರು. ಕೊಪ್ಪಳ ಹಿರಿಹಿರಿ ಕುಗ್ಗಿದರು. ಅದು ಕಣವಿಯವರಿಗೆ ಕಿಂಚಿತ್ ಮುಜುಗರ ಉಂಟುಮಾಡಿದರೂ, 'ಕಿರಿಯರ ಬಳಗ' ಕಟ್ಟಿಕೊಳ್ಳಲು ಸಹಾಯಕವಾಯಿತು. ಇದು ಅವರ ಸ್ನೇಹಪರತೆಯ ಪ್ರಥಮ ಸಂಘಟನೆಯೇ ಆಗಿತ್ತು. 

ಕಣವಿಯವರನ್ನು ಬೆಳೆಸಿದ ಸಂಸ್ಥೆಗಳಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘವೂ ಒಂದು. ಈ ಸಂಸ್ಥೆ ನಿರಂತರವಾಗಿ ಕನ್ನಡ, ಕರ್ನಾಟಕತ್ವದ ಮಂತ್ರವನ್ನು ಜಪಿಸುತ್ತಲೇ ನೂರು ಸಂವತ್ಸರಗಳನ್ನು ಸಾರ್ಥಕವಾಗಿ ಪೂರೈಸಿದ್ದು, ಕನ್ನಡಕ್ಕೆ ಆತಂಕ ಕಂಡುಬಂದಾಗಲೆಲ್ಲ ಧೀರೋದಾತ್ತ ಹೋರಾಟ ನಡೆಸಿದೆ. ಕಣವಿಯವರ ಕಾವ್ಯದ ಮೊಗ್ಗು ಅರಳುವ ಆ ಬಾಲ್ಯಾವಸ್ಥೆಯಲ್ಲಿ ಸಂಸ್ಕೃತಿಯ ಸೂರ್ಯಕಾಂತಿಯ ಬೆಳಕನ್ನು ಈ ಸಂಸ್ಥೆ ನೀಡಿದೆ. ಆಗಾಗ ಏರ್ಪಡಿಸಲಾಗಿದ್ದ ಭಾವಗೀತೆಗಳ ಗಾಯನವನ್ನು ತನ್ಮಯತೆಯಿಂದ ಆಲಿಸಿದ್ದಾರೆ. ಅಷ್ಟೇ ಅಲ್ಲದೆ ಬೇಂದ್ರೆ, ಆನಂದಕಂದರಂಥ ಕವಿಗಳ ಕವಿತೆಗಳನ್ನು ಅವರ ಬಾಯಿಯಿಂದಲೇ ಕೇಳಿ ಆನಂದಿಸಿದ್ದಾರೆ. ಪುಲಕಿತರೂ ಆಗಿದ್ದಾರೆ. 

ಕರ್ನಾಟಕ ವಿದ್ಯಾವರ್ಧಕ ಸಂಘ ಸಾಂದರ್ಭಿಕವಾಗಿ ಏರ್ಪಡಿಸುತ್ತಿದ್ದ ವಕ್ತೃತ್ವ ಸ್ಪರ್ಧೆಯಲ್ಲಿ (ಭಾಷಣ ಸ್ಪರ್ಧೆ) ಕಣವಿ ಭಾಗವಹಿಸಿ ಬಹುಮಾನಗಳನ್ನು ಪಡೆದಿದ್ದಾರೆ. ಪ್ರೌಢಶಾಲೆಯ ವಿದ್ಯಾರ್ಥಿಯಾದಾಗಿನಿಂದ ತಮ್ಮ ಶಿಕ್ಷಣ ಮುಗಿಯುವವರೆಗೂ ಕಣವಿಯವರು ಅಲ್ಲಿ ತಮ್ಮ ಕವಿತ್ವದ ಮಿಂಚುಗಳನ್ನು ಪ್ರದರ್ಶಿಸಿದ್ದಾರೆ. ಒಂದು ಕಡೆಯಿಂದ ಹಿರಿಯರಿಂದ ಜ್ಞಾನವನ್ನು ಗ್ರಹಿಸುತ್ತ, ಇನ್ನೊಂದು ಕಡೆಯಿಂದ ತಮ್ಮ ಕವಿತ್ವ ಶಕ್ತಿಯನ್ನು ಹೊರಹೊಮ್ಮಿಸುತ್ತ ಕಣವಿ ಬೆಳೆದರೆಂದೇ ಹೇಳಬಹುದು. 

ಕಣವಿ ತಮ್ಮ ಶಾಲೆಯ ಅಧ್ಯಯನವನ್ನು ಅಲಕ್ಷಿಸಿದವರಲ್ಲ. ಯಥಾಪ್ರಕಾರ ತಮ್ಮ ಪ್ರಥಮ ಶ್ರೇಣಿಯನ್ನು ಕಾಯ್ದುಕೊಳ್ಳುತ್ತ, ಎಲ್ಲ ಶಿಕ್ಷಕರ ಪ್ರೀತಿಗೂ ಪಾತ್ರರಾಗುತ್ತ, ವರ್ಷದಿಂದ ವರ್ಷಕ್ಕೆ ಪ್ರಗತಿ ಸಾಧಿಸುತ್ತ ನಡೆದರು. ಅಂದಿನ ಮೆಟ್ರಿಕ್ ಪರೀಕ್ಷೆಯ ಅಭ್ಯಾಸವನ್ನು ಹೆಚ್ಚು ಮನಸ್ಸುಕೊಟ್ಟೇ ಮಾಡಿದರು. ಪ್ರಥಮ ಶ್ರೇಣಿಯಲ್ಲಿ ಪ್ರಶಸ್ತಿಯ ಅಂಕಗಳನ್ನು ಪಡೆದು ತೇರ್ಗಡೆಯಾದರು. ಈ ಮಧ್ಯೆ ಮುಲ್ಕೀ ಪರೀಕ್ಷೆಯ ಸಾಧನೆಯ ಆಧಾರದಿಂದ ಶಿಕ್ಷಕ ವೃತ್ತಿಗೆ ಅರ್ಜಿಯನ್ನೇನೋ ಕಳಿಸಿದ್ದರು. ಆದರೆ ಅವರ ಅಧ್ಯಯನದ ಆಸಕ್ತಿ, ಸಾಹಿತ್ಯದ ಅಭಿರುಚಿ, ಕಾವ್ಯನಿರ್ಮಿತಿಯ ಹಂಬಲ- ಇತ್ಯಾದಿಗಳು ಆ ವೃತ್ತಿಯ ಕಡೆಗೆ ಹೊರಳುವಂತೆ ಮಾಡಲಿಲ್ಲ. 

ಕಣವಿಯವರು ಉತ್ತರ ಕರ್ನಾಟಕದ ಅತ್ಯಂತ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಕರ್ನಾಟಕ ಕಾಲೇಜನ್ನು ಸೇರಿದರು. ಉನ್ನತ ದರ್ಜೆಯ ಪ್ರಾಧ್ಯಾಪಕರ ಪಡೆಯೇ ಅಲ್ಲಿತ್ತು. ಪ್ರತಿಯೊಬ್ಬರೂ ತಮ್ಮ ತಮ್ಮ ಕ್ಷೇತ್ರದಲ್ಲಿ ನಿರಂತರ ಸಾಧನೆ ಮಾಡುವವರೇ ಆಗಿದ್ದರು. ಕಣವಿಯವರು ಕಾಲೇಜಿನ ಪ್ರಥಮ ವರ್ಷದಲ್ಲಿ ತೇರ್ಗಡೆಯಾಗಿ, ದ್ವಿತೀಯ ವರ್ಷಕ್ಕೆ - ಅಂದರೆ ಆಗಿನ ಇಂಟರ್ ಆರ್ಟ್ಸ್  ತರಗತಿಗೆ - ಬಂದಾಗ, ಭಾರತದ ಬಂಧವಿಮೋಚನೆಯಾಯಿತು. ಅದು ಅತ್ಯಂತ ಸಂಭ್ರಮದ ಸಂದರ್ಭ. ಕಣವಿ 'ಬಂಧದಿಂ ಬಿಡುಗಡೆಗೆ' ಬರೆದದ್ದು ಆಗಲೇ. ಪ್ರೌಢಶಾಲೆಯಲ್ಲಿ ಪ್ರಯೋಗಾವಸ್ಥೆಯಲ್ಲಿದ್ದ ಅವರ ಕವಿತೆ ಈಗ ನಿದರ್ಿಷ್ಟವಾದ ರೂಪಧಾರಣ ಮಾಡಿಕೊಳ್ಳತೊಡಗಿತ್ತು. ಅವರ ಕವಿತೆಗಳು ಒಂದೊಂದಾಗಿ 'ಜಯ ಕರ್ನಾಟಕ', 'ಜಯಂತಿ', 'ಜೀವನ' ಈ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗತೊಡಗಿದವು. 

ಕಣವಿಯವರು ಬಿ.ಎ.(ಆನರ್ಸ್) ತರಗತಿಗೆ ಪ್ರವೇಶ ಪಡೆದದ್ದು ಅವರು ಕನ್ನಡವನ್ನು ಮುಖ್ಯ ವಿಷಯವಾಗಿ ಆಯ್ದುಕೊಂಡಿದ್ದರು. ಇಂಗ್ಲಿಷ್ ಐಚ್ಛಿಕ ವಿಷಯವಾಗಿತ್ತು. ಕೀರ್ತಿನಾಥ ಕುರ್ತಕೋಟಿ, ಚಿದಂಬರ ದೀಕ್ಷಿತ, ಶಂಕರ ಮೊಕಾಶಿ ಪುಣೇಕರ, ವಸಂತ ಕವಲಿ, ಗೋವಿಂದ ಕಣೇಕಲ್ಲ ಮುಂತಾದವರೂ ಆಗ ಕರ್ನಾಟಕ ಕಾಲೇಜಿನ ಪದವಿ ತರಗತಿಯ ವಿದ್ಯಾರ್ಥಿಗಳಾಗಿದ್ದರು. ಎರಡನೆಯ ತಲೆಮಾರಿನ ಲೇಖಕರ ಒಂದು ಬಳಗವೇ ಒತ್ತಟ್ಟಿಗೆ ಸೇರಿದಂತಿತ್ತು. ಕಾಲೇಜು ವ್ಯಾಸಾಂಗಕ್ಕೆ ತೊಡಗಿದ ಮೇಲೆ ಕಣವಿಯವರು ಮಾಳಮಡ್ಡಿಯಲ್ಲಿ ಒಂದು ಕೋಣೆಯಲ್ಲಿ ವಾಸವಾಗಿದ್ದರು. ಆ ಕೋಣೆ ಕಣವಿಯವರ ಸ್ನೇಹಪರತೆಯಿಂದಾಗಿ ಸಾಹಿತಿಗಳ ಜೇನುಗೂಡಾಯಿತು. ಪ್ರೌಢಶಾಲೆಯಲ್ಲಿದ್ದಾಗ 'ಕಿರಿಯರ ಬಳಗ' ಕಟ್ಟಿಕೊಂಡಿದ್ದ ಕಣವಿ ಇಲ್ಲಿ ತಮ್ಮ ಓರಗೆಯ ಬರೆಹಗಾರರನ್ನೊಳಗೊಂಡು 'ಕಾವ್ಯಾನುಭವ ಮಂಟಪ' ನಿರ್ಮಿಸಿಕೊಂಡರು. ಪ್ರತಿ ರವಿವಾರ ಇವರೆಲ್ಲ ಕೂಡಿ ಸ್ವರಚಿತ ಕವಿತೆಗಳನ್ನು ವಾಚಿಸುವುದು ಮತ್ತು ಅವುಗಳನ್ನು ಚರ್ಚಿಸುವುದು ಮಾಡತೊಡಗಿದರು. ಕಾಲೇಜು ವಿದ್ಯಾಥರ್ಿಯಾಗಿ, ಕಾವ್ಯಾನುಭವ ಮಂಟಪದ ರೂವಾರಿಯಾಗಿ, ಕವಿಯಾಗಿ ಬೆಳೆಯುತ್ತಿದ್ದ ಕಣವಿಯವರ ಸ್ನೇಹವಲಯಕ್ಕೆ ಬಂದವರಲ್ಲಿ ಬಸವರಾಜ ಕಟ್ಟೀಮನಿಯವರೂ ಒಬ್ಬರು. ಪರಸ್ಪರ ಸಾಹಿತ್ಯ ಬಾಂಧವ್ಯ ಬೆಳೆದು, ಕಟ್ಟೀಮನಿಯವರು ಆಗಾಗ ಕಾವ್ಯಾನುಭವ ಮಂಟಪಕ್ಕೆ ಭೇಟಿಕೊಡುತ್ತಿದ್ದರು. ಧಾರವಾಡಕ್ಕೆ ಬರುವ ಸಂದರ್ಭ ಬಂದಾಗ ಬೀಚಿಯವರು ಕಣವಿಯವರ ಕೋಣೆಗೆ ಆಗಮಿಸುತ್ತಿದ್ದುದು ಒಂದು ವಿಶೇಷ. ಕಣವಿಯವರ ಕವಿತೆಯ ರುಚಿಯನ್ನು ಸವಿದ ಬೀಚಿ ಅವರು ತಯಾರಿಸುವ ಚಹಾದ ರುಚಿಗೂ ಮಾರುಹೋಗಿದ್ದರು. ಒಟ್ಟಾರೆ ಕಣವಿಯವರ ಮುಕ್ತ ಚಿಂತನೆಗಳಿಗೆ, ಕಾವ್ಯ ಚೈತನ್ಯ ಹಾಗೂ ಕಾವ್ಯರಚನೆಗೆ ಧಾರವಾಡ ಸ್ಫೂತರ್ಿಯ ಸೆಲೆಯಾಗಿತ್ತು. 
ಧಾರವಾಡ ಕುರಿತಾದ ಕಣವಿಯವರ ಈ ಕವಿತೆ ಮೇಲಿನ ಮಾತನ್ನು ಪುಷ್ಟೀಕರಿಸುತ್ತದೆ. 

ಧಾರವಾಡದ ನೆಲದ ಗುಣವೇನೊ ಋಣವೇನೊ!
ಕವಿಗಾಳಿ-ಸವಿಗಾಳಿ ತೀಡುತಿಹುದು, 
ಧಾರವಾಡದ ತಾಯಮಡಿಲಲ್ಲಿ ಮೊರೆಯಿಟ್ಟ 
ದತ್ತವಾಣಿ ಎದೆಯು ಕೋಡುತಿಹುದು

ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಎಂ.ಎ. ಪದವಿಯನ್ನು ಪಡೆದು, ಅದೇ ವಿಶ್ವವಿದ್ಯಾನಿಲಯದ ಪ್ರಸಾರಾಂಗದ  ಕಾರ್ಯದರ್ಶಿಯಾಗಿ ವೃತ್ತಿ ಜೀವನವನ್ನು ಆರಂಭಿಸಿದರು. ಆ ಸಂದರ್ಭದಲ್ಲೇ ಇವರ ವಿವಾಹ ಗಿಡ್ನವರ್ ಅವರ ಪುತ್ರಿ ಶಾಂತಾದೇವಿಯವರೊಡನೆ ನಡೆಯಿತು. ಸಾಹಿತ್ಯ ಸಂಸ್ಕೃತಿಯಲ್ಲಿ ಒಲವುಳ್ಳವರೂ, ಕತೆಗಾರ್ತಿಯೂ ಆಗಿದ್ದ ಶಾಂತಾದೇವಿಯವರು ಕಣವಿಯವರಿಗೆ ಅನುರೂಪ ಪತ್ನಿಯಾಗಿದ್ದರು. ವಿವಾಹಾನಂತರ ಕಣವಿಯವರ ವೃತ್ತಿ ಜೀವನ ಹಾಗೂ ವೈವಾಹಿಕ ಜೀವನಗಳು ಧಾರವಾಡದಲ್ಲಿಯೇ ಪ್ರಾರಂಭವಾದವು. ಕರ್ನಾಟಕ ವಿಶ್ವವಿದ್ಯಾಲಯದ ಪ್ರಸಾರಾಂಗದ ನಿರ್ದೇಶಕರಾಗಿ ನೇಮಕಗೊಂಡರು. 

ಕಣವಿಯವರದು ಅನುರೂಪ ದಾಂಪತ್ಯ, ತುಂಬುಸಂಸಾರ, ಯಾವುದೇ ಒಬ್ಬ ಕವಿಯ ಕಾವ್ಯಪರಿಪೂರ್ಣತೆಗೆ ಆತನ ದಾಂಪತ್ಯ ಜೀವನ ಬಹುತೇಕ ಸಫಲತೆಯನ್ನು ತಂದುಕೊಡುತ್ತದೆ. ಎಂಬುದಕ್ಕೆ ಕಣವಿಯವರ ಜೀವನವೇ ಸಾಕ್ಷಿಯಾಗಿದೆ.  ಕಣವಿಯವರ ಪತ್ನಿ ಶಾಂತಾದೇವಿಯವರ ಹೇಳಿಕೆಯಂತೆ ಒಮ್ಮೆ ಅವರು ವೈದ್ಯಕೀಯ ಪರೀಕ್ಷೆಗೆಂದು ಹೋಗಿದ್ದ ಇಪ್ಪತ್ತು ದಿನಗಳನ್ನು ಬಿಟ್ಟರೆ ಮದುವೆಯಾದಂದಿನಿಂದ ಒಂದು ದಿನವೂ ಅವರು ಇವರಿಂದ ಬೇರೆಯಾಗಿರಲಿಲ್ಲ. ಶಾಂತಾದೇವಿಯವರು ಕಣವಿಯವರ ಬಾಳಸಂಗಾತಿಯಾಗಿ ಅವರ ಸಾರಸ್ವತ ಬದುಕಿಗೆ ಒತ್ತಾಸೆಯಾಗಿ, ನೆಮ್ಮದಿಯ ಬದುಕಿಗೆ ಕಾರಣರಾದರು. ಕಣವಿಯವರಿಗೆ ಮಕ್ಕಳೆಂದರೆ ಎಲ್ಲಿಲ್ಲದ ಪ್ರೀತಿ. ಕಣವಿ ದಂಪತಿಗಳಿಗೆ ಐದು ಜನ ಮಕ್ಕಳು. ಮೊದಲನೆಯ ಮಗ ಶಿವಾನಂದ ಮುಂಬೈನಲ್ಲಿ 'ಬಿಸಿನೆಸ್ ಇಂಡಿಯಾ'ದಲ್ಲಿ ಉಪಸಂಪಾದಕನಾಗಿದ್ದಾನೆ. ಎರಡನೆಯವನು ಚಂದ್ರಮೌಳಿ-ಬೆಂಗಳೂರಿನಲ್ಲಿ 'ಸ್ಟೇಟ್ ಬ್ಯಾಂಕ್ ಆಫ್ ಮೈಸೂರು' ನ ಉದ್ಯೋಗಿ. ಮೂರನೆಯವಳೇ ರಂಜನಾ-ಕಣವಿಯವರಿಗೆ ಮಗಳೆಂದರೆ ಪ್ರಾಣ. ಅತ್ಯಂತ ಮೃದು ಸ್ವಭಾವದ ಕಣವಿಯವರು ಮಗಳು ಗಂಡನ ಮನೆಗೆ ಹೊರಟಾಗ ಮಾತ್ರ ದುಃಖಿಸಿದ್ದರೆಂದು ತಿಳಿದುಬಂದಿದೆ. ನಾಲ್ಕನೆಯವನು ಪ್ರಿಯದರ್ಶಿ. ಐದನೆಯವನು ಕರುಣಾಪ್ರಸಾದ್. ಇವರಿಬ್ಬರೂ ಇಂಜಿನಿಯರುಗಳು. ಕಣವಿ ದಂಪತಿಗಳು ಒಂಭತ್ತು ಮೊಮ್ಮಕ್ಕಳಿಗೆ ಅಜ್ಜ ಅಜ್ಜಿ. ಒಟ್ಟಿನಲ್ಲಿ ಸಂತೃಪ್ತ ಜೀವನ ನಡೆಸಿದ ತೃಪ್ತಿ ಕಣವಿ ದಂಪತಿಗಳಿಗಿದೆ.

ಕಣವಿಯವರದು ಬಹಳ ಸರಳವಾದ ಜೀವನ. ಸ್ನೇಹಜೀವಿ, ಮಿತಭಾಷಿ, ಸಾಧು, ಸ್ವಭಾವದ ಸೌಜನ್ಯಮೂರ್ತಿ ಆಗಿರುವ ಕಣವಿಯವರು ನಿರ್ಮಲ ಅಂತಃಕರಣವುಳ್ಳ ಸಂಕೋಚ ಪ್ರವೃತ್ತಿಯವರಾಗಿದ್ದಾರೆ.  ಸದಾ ಮುಗುಳ್ನಗೆಯಿಂದ ಕೂಡಿರುವ ಇವರು, ಸಾತ್ವಿಕ ವ್ಯಕ್ತಿತ್ವದ ಪ್ರತೀಕವಾಗಿದ್ದಾರೆ. ಬದುಕಿನ ಆಳವನ್ನು ಶೋಧಿಸುವ ಪ್ರವೃತ್ತಿ, ಆಶಾವಾದಿತ್ವ, ಸಕಾರಾತ್ಮಕ ದೃಷ್ಟಿಕೋನ, ಇವು ಕಣವಿಯವರ ಕಾವ್ಯದಲ್ಲಿ ಕಂಡು ಬರುವ ವಿಚಾರಗಳಾಗಿವೆ. ಧಾರವಾಡದ ಇವರ ಮನೆ 'ಚಂಬೆಳಕು' ಮನೆಯ ಸುತ್ತಲೂ ಹೂಗಿಡಗಳನ್ನು ಬೆಳಸಲಾಗಿದೆ. ಹೂಗಿಡಗಳನ್ನು ಬೆಳೆಸುವುದರಲ್ಲಿ ಇವರಿಗೆ ವಿಶೇಷವಾದ ಆಸಕ್ತಿ ಇರುವುದು ಕಂಡು ಬರುತ್ತದೆ. ಇವರ ಮನೆ ಇವರ ಮನಸ್ಸಿನ ಪ್ರತಿಬಿಂಬವಾಗಿದೆ. 

ಪ್ರಕೃತಿಯಲ್ಲಿ ಕಂಡು ಬರುವ ವಿಸ್ಮಯ, ಕುತೂಹಲ, ಜಿಜ್ಞಾಸೆ, ಸೌಂದರ್ಯ ಮುಂತಾದುವುಗಳ ಮೂಲಕ ಮಾನವ ಜೀವನವನ್ನು ಕುರಿತಾದ ಚಿಂತನೆಗಳು ಇವರ ಪ್ರಕೃತಿ ಗೀತೆಗಳ ವಿಶೇಷತೆಗಳಾಗಿವೆ. ನಿಸರ್ಗದ ಬಗ್ಗೆ ಅಗಾಧವಾದ ಪ್ರೀತಿಯನ್ನು ಹೊಂದಿದ್ದ ಕಣವಿಯವರು ಅದನ್ನು ಮಾನವ ಜೀವನದ ಅವಿಭಾಜ್ಯ ಅಂಗವೆಂಬ ತತ್ವವನ್ನು ತಮ್ಮ ಪ್ರಕೃತಿ ಗೀತೆಗಳ ಮೂಲಕ ಪ್ರತಿಪಾದಿಸಿದ್ದಾರೆ. ಇವರ ಪ್ರಕೃತಿಗೀತೆಗಳಲ್ಲಿ ಅನೇಕ ಕವಿಗಳ ಪ್ರಭಾವವಿದ್ದರೂ ತಮ್ಮದೇ ಆದ ಸ್ವಂತಿಕೆಯನ್ನು ಮೆರೆದಿರುವುದು ವಿಶೇಷವಾಗಿದೆ. ಕವಿಗೆ ನಿಸರ್ಗವೇ ಶಾಂತಿಯ ತಾಣವಾಗಿದೆ. ಕಣವಿಯವರ 'ಹುಲ್ಲು' ಕವಿತೆ ಪ್ರಸಿದ್ಧವಾದುದು. ಯಾರ ಪ್ರಯತ್ನವಿಲ್ಲದೆಯೂ ಬದುಕಿನ ಅದಮ್ಯ ಚೈತನ್ಯದ ಪ್ರತೀಕವಾಗಿರುವ ಹುಲ್ಲು ಹೀಗೆ ಬೆಳೆಯುತ್ತದೆ. 

ಬೆಳೆಯಲೇಬೇಕೆಂಬ ದೃಢಸಂಕಲ್ಪವಿದ್ದರೆ, ಎಲ್ಲಿಯಾದರೂ, ಎಂತಹ ಇಕ್ಕಟ್ಟಿನಲ್ಲಿಯೂ ಬೆಳೆಯುವ ಹುಲ್ಲು ಪ್ರಗತಿಯ ಸಂಕೇತವಾಗಿದೆ. ಅದು ಬಂಡೆಗಲ್ಲಿನ ತಳವಾಗಿರಲಿ, ಸಿಮೆಂಟು ಗೋಡೆಗಳ ಬಿರುಕಾಗಿರಲಿ, ಬೆಳೆಯಲೇಬೇಕೆಂಬ ಅದಮ್ಯ ಬಯಕೆಯಿಂದ ದನಕರುಗಳು ಮೇಯ್ದು ಹೋದ ಮೇಲೂ, ಕತ್ತರಿಸಿ ಬಿಸಾಡಿದಾಗಲೂ ಜೀವನುತ್ಸಾಹದಿಂದ ಮತ್ತೆ ಮತ್ತೆ ಅಷ್ಟೇ ವೇಗವಾಗಿ ಬೆಳೆಯುತ್ತದೆ. ಅದರ ಬತ್ತದುತ್ಸಾಹದಿಂದ ಮನುಷ್ಯನಿಗೊಂದು ಜೀವನ ಸಂದೇಶ ಪ್ರಾಪ್ತವಾಗುತ್ತದೆ. ಪ್ರಕೃತಿಯ ಒಂದು ಅಂಗವೇ ಆದ ಮನುಷ್ಯನಿಗೂ ಪ್ರಕೃತಿಗೂ ಬಿಡಿಸಲಾರದ ಬಂಧವಿದೆ. ಕಣವಿಯವರ ಬಹುತೇಕ ಕವಿತೆಗಳಲ್ಲಿ ಪ್ರಕೃತಿ ಅನಾಯಾಸವಾಗಿ, ಮುಖ್ಯವಾಹಿನಿಯಾಗಿ ಹರಿದು ಬಂದಿರುವುದು ಕಣವಿಯವರ ಕಾವ್ಯದ ವೈಶಿಷ್ಟ್ಯವಾಗಿದೆ. 

ಶ್ರಾವಣಮಾಸದ ಪ್ರಕೃತಿ ಚಿತ್ರಣವೂ ಅಷ್ಟೇ ಸುಂದರವೂ ವಾಸ್ತವಿಕವೂ ಆಗಿ ಮೂಡಿಬಂದಿದೆ. ಶ್ರಾವಣ ಹೂವುಗಳ ಕಾಲ. ಪ್ರಕೃತಿಯೆಲ್ಲವೂ ಹಸಿರು-ಹೂವುಗಳಿಂದ ಕಂಗೊಳಿಸುತ್ತದೆ. ಕವಿಯ ಭಾಷೆಯಲ್ಲಿ ಹೇಳುವುದಾದರೆ 'ನೆಲದ ಕೊರತೆಯನೆಲ್ಲ ತುಂಬಿಕೊಟ್ಟಿದೆ ಹಸುರು'. ಈ ಹಸುರು ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ. ಪ್ರಕೃತಿಯಲ್ಲಿ ಕಾಣಬರುವ ಈ ಸಮೃದ್ಧಿಯೇ ಸಂತೋಷ ಹಾಗೂ ಹಬ್ಬಗಳ ರೂಪದಲ್ಲಿ ಮೂಡಿಬರುತ್ತದೆ. ವ್ರತ, ನಿಯಮ, ಇಷ್ಟದೇವತೆ, ಗ್ರಾಮದೇವತೆಗಳ ಪೂಜೆ ಇವೆಲ್ಲವೂ ಮನುಷ್ಯ ತನ್ನ ಸಂತೋಷಕ್ಕೆ ಕೊಡುವ ವಿವಿಧ ರೂಪಗಳು ಹರಕು ಮುರುಕು ಜೋಪಡಿಯಲ್ಲಿ, ಚಿಂದಿಬಟ್ಟೆಯಲ್ಲಿರುವವವರು ಶ್ರಾವಣ ಮಾಸದ ಈ ಸಂದರ್ಭದಲ್ಲಿ ತಮ್ಮ ಬದುಕಿನ ಪ್ರಶ್ನೆಗಳಿಗೆ, ಕೊರತೆಗಳಿಗೆ ಪ್ರಕೃತಿಯಲ್ಲೇ ಉತ್ತರ ಹುಡುಕುವ ಪ್ರಯತ್ನ ಮಾಡುತ್ತಾರೆ. ಸೃಷ್ಟಿ ಮಾತ್ರ ನಿರಂತರವಾಗಿ ತನ್ನ ಪರಿವರ್ತನಾಶೀಲತೆಯನ್ನು ಮುಂದುವರೆಸಿಕೊಂಡು ಹೋಗುತ್ತದೆ. 

ಪ್ರಕೃತಿಯ ಸೊಬಗಿನಿಂದ ಪ್ರೇರಿತನಾಗಿ ಮನುಷ್ಯನು ಅನುಭವಿಸುವ ಆನಂದವೆ ಉತ್ಸವ ಹಬ್ಬಗಳ ರೂಪವನ್ನು ಪಡೆಯುತ್ತದೆ ಎಂಬ ಸತ್ಯವನ್ನು ಆಶ್ವಯುಜ ಮಾಸದಲ್ಲಿ ನಡೆಯುವ ನವರಾತ್ರಿ ಉತ್ಸವ, ಪ್ರಾಕೃತಿಕ ಶಕ್ತಿಯ ಪ್ರತೀಕವಾದ ಶಕ್ತಿ ದೇವತೆಯ ಪೂಜೆ, ಆಯುಧ ಪೂಜೆಯ ಮಹತ್ವ, ವಿಜಯದಶಮಿಯ ದಿಗ್ವಿಜಯ. ಹೀಗೆ ಕಾರ್ತೀಕ, ಮಾರ್ಗಶಿರ, ಪುಷ್ಯ, ಮಾಘ, ಫಾಲ್ಗುಣ ಮುಂತಾದ ಎಲ್ಲ ಮಾಸಗಳಲ್ಲಿ ಕಂಡು ಬರುವ ಪ್ರಕೃತಿಯ ವಿವಿಧ ರೂಪಗಳು, ಅದಕ್ಕನುಸಾರವಾದ ಮನುಷ್ಯನ ಸಂತೋಷ, ದುಃಖ ದುಮ್ಮಾನ ಆಯಾ ಸಂದರ್ಭಗಳಲ್ಲಿ ಕಂಡು ಬರುವ ಹೂವು-ಹಣ್ಣು, ಚಿಗುರು-ಅವುಗಳಿಂದಾಗುವ ಪ್ರಯೋಜನ, ಅವೆಲ್ಲವನ್ನು ಸ್ವೀಕರಿಸಿ ಆಸ್ವಾದಿಸುವ ಮನುಷ್ಯ ಮನಸ್ಸಿನ ವಿವರಗಳು ತಂತಾನೆ ಬಿಚ್ಚಿಕೊಳ್ಳುತ್ತ ಹೋಗುವುದು ಈ ಪ್ರಕೃತಿ ಕವಿತೆಗಳ ವಿಶೇಷತೆಯಾಗಿದೆ. 'ಫಾಲ್ಗುಣ' ಕವಿತೆಯ ಈ ಸಾಲುಗಳು  ಇದಕ್ಕೆ ಸಮರ್ಥನೆಯಾಗಿ ಕಂಡುಬರುತ್ತದೆ. 

ಹೊಯ್ಕೊಂಡ ಬಾಯ್ಗೆ ಹೋಳಿಗೆ ತುಪ್ಪ-ಹಳೆಯ ಕತೆ
ಹಿಂದಿನದನ್ನು ನೆನೆದು ಹಿತ್ತಲದಲ್ಲಿ ಅತ್ತಂತೆ 
ಮುಂಬಾಗಿಲಲಿ ಚೈತ್ರ ಶುಕ್ಲ ಪ್ರತಿಪದೆ, ತರಳ
ಮಾವು-ಬೇವಿನ ಹೂವು ಚಿಗುರು ರುಚಿಯುಂಡವನು
ಎಲ್ಲ ಮಳೆಗಾಲಕ್ಕು ಮೈ ಜುಮ್ಮು ಗೊಂಡವನು....

ಕಣವಿಯವರ ಪ್ರಕೃತಿ ಗೀತೆಗಳಲ್ಲಿ ಪ್ರಾಕೃತಿಕ ಹಾಗೂ ಸಾಂಸ್ಕೃತಿಕ ಚಿತ್ರಣಗಳ ಪರಿಪಾಕ ಕಂಡು ಬರುತ್ತದೆ. ಕಣವಿಯವರ ಕವಿತೆಗಳಲ್ಲಿ ನಿಸರ್ಗ ಪ್ರೇಮ, ಜೀವನಪ್ರೇಮ, ಗೆಳೆತನದ ಮಹತ್ವ, ದಾಂಪತ್ಯ ಪ್ರೇಮ, ಮಕ್ಕಳ ಪ್ರೀತಿ ವಾತ್ಸಲ್ಯ ಮುಂತಾದವುಗಳಿಗೆ ಸಂಬಂಧಿಸಿದಂತೆ ನಾಡು ನುಡಿಯ ಮೇಲೆ, ಕನ್ನಡದ ಉಳಿವಿನ ಬಗೆಗೂ ಅಪಾರವಾದ ಕಾಳಜಿ ಅವರ ಕವಿತೆಗಳಲ್ಲಿ ಕಂಡುಬರುತ್ತದೆ. 

ಕನ್ನಡಿಗರ ಹೆಮ್ಮೆಯ ನಾಡು ಕರ್ನಾಟಕ, ಈ ಹೆಸರನ್ನು ಜಾರಿಗೆ ತರುವಲ್ಲಿ ಸುಮಾರು ಒಂದೂವರೆ ದಶಕಗಳೇ ಬೇಕಾಯಿತು. ಕನ್ನಡಿಗರ ತಾಣವಾದ ಕರ್ನಾಟಕವನ್ನು ಕುರಿತ ಕಣವಿಯವರ ಈ ಕವಿತೆ ಕರ್ನಾಟಕದ ಒಂದು ಸಮಗ್ರ ಚಿತ್ರ ಕನ್ನಡಮ್ಮನಿಗೆ ಅರ್ಪಿಸಿದ ಕಣವಿಯವರ ಭಾವಸಮರ್ಪಣೆಯಾಗಿದೆ. 

ಹೆಸರಾಯಿತು ಕರ್ನಾಟಕ / ಉಸಿರಾಗಲಿ ಕನ್ನಡ ;
ಹಸಿಗೋಡೆಯ ಹರಳಿನಂತೆ / ಹುಸಿಹೋಗದ ಕನ್ನಡ

ಕಣವಿಯವರ ಮತ್ತೊಂದು ಪ್ರಸಿದ್ಧವಾದ, ಕನ್ನಡನಾಡಿನ ಮನೆ ಮಾತಾಗಿರುವ ಕವಿತೆ 'ವಿಶ್ವಭಾರತಿಗೆ ಕನ್ನಡದಾರತಿ'. 

ವಿಶ್ವವಿನೂತನ ವಿದ್ಯಾಚೇತನ ಸರ್ವಹೃದಯಸಂಸ್ಕಾರಿ
ಜಯಭಾರತಿ, ಕರುನಾಡ ಸರಸ್ವತಿ 
ಗುಡಿಗೋಪುರ ಸುರಶಿಲ್ಪಕಲಾಕೃತಿ 
ಕೃಷ್ಣೆ, ತುಂಗೆ, ಕಾವೇರಿ ಪವಿತ್ರ್ರಿತ ಕ್ಷೇತ್ರ ಮನೋಹಾರಿ.......

ಈ ಕವಿತೆಯ ಮೂಲಕ ಕರ್ನಾಟಕದ ಸಂಸ್ಕೃತಿ, ಇತಿಹಾಸ, ಮತಧರ್ಮಗಳು, ರಾಜವಂಶಗಳು, ದಾರ್ಶನಿಕರು, ಆಚಾರ್ಯರು, ವಚನಕಾರರು, ದಾಸರು, ಶರಣರು, ಕಲಾವಿದರು ಮುಂತಾದವರನ್ನು ಸ್ಮರಿಸಲಾಗಿದೆ. 

ಕಣವಿಯವರು ಸೃಜನಶೀಲ ಕವಿಯಾಗಿರುವಂತೆ, ಅನುವಾದಕರೂ ಆಗಿದ್ದಾರೆ. ಅನೇಕ ಕವಿತೆಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ವಿಶ್ವಸಾಹಿತ್ಯದ ಕಡೆಗೆ ದೃಷ್ಟಿ ಬೀರಿದ ಇವರು ಇಂಗ್ಲಿಷ್, ಬಂಗಾಲಿ, ಉದರ್ು, ಪಂಜಾಬಿ, ಕಾಶ್ಮೀರಿ, ಆಫ್ರಿಕನ್, ಝೆಕ್, ಅರೇಬಿಕ್, ಹಿಂದಿ ಮುಂತಾದ ಭಾಷೆಗಳ ಕವಿತೆಗಳನ್ನು ಕನ್ನಡಾನುವಾದ ಮಾಡಿದ್ದಾರೆ. ಇವರ ಅನುವಾದಿತ ಕವಿತೆಗಳು ಯಾವುದೇ ಒಂದು ಭಾಷೆ, ಕವಿ, ದೇಶಕ್ಕೆ ಸೀಮಿತವಾಗಿಲ್ಲ. ಇತಿಕಾ ಅಂತೂಲಿ, ಕುಮಲೋ, ಡೆನ್ನಿಸ್ ಬುಟಸ್, ಜೋಸೆಫ್ ಮಿಶಾಲಿ, ಡಾನ್ ಮಟೌರಾ ಇತ್ಯಾದಿ ಕವಿಗಳ ಕೆಲವು ಕವನಗಳನ್ನು ಅನುವಾದ ಮಾಡಿರುವುದು ಕಂಡುಬರುತ್ತದೆ. 

'ಕಾವ್ಯಾಕ್ಷಿ'ಯಿಂದ ಕಾವ್ಯದ ಕಣ್ಣು ತೆರೆದು, ನವೋದಯದ 'ಭಾವಜೀವಿ'ಯಾಗಿ, ಕಲ್ಪನೆ ವಾಸ್ತವಗಳ 'ಆಕಾಶ ಬುಟ್ಟಿ' ಹೊತ್ತು, 'ಮಧು-ಚಂದ್ರ' ದಿಂದ ಹೊಸ ಸ್ಫೂರ್ತಿ ಪಡೆದು, 'ದೀಪಧಾರಿ'ಯಿಂದ ಮನೆ-ಮನ ಬೆಳಗಿಸಿಕೊಂಡು, 'ಮಣ್ಣಿನ ಮೆರವಣಿಗೆ' ಯಿಂದ ವಾಸ್ತವವನ್ನರಿತು, ಆದರ್ಶ-ಯಥಾರ್ಥಗಳಿಂದ 'ನೆಲ-ಮುಗಿಲು'ಗಳನ್ನು ಸಮನ್ವಯಗೊಳಿಸಿ, ಬದುಕು-ಕಾವ್ಯಗಳೆಂಬ 'ಎರಡು-ದಡ'ಗಳ ಸೇತುವೆಯಾಗಿ, 'ನಗರದಲ್ಲಿ-ನೆರಳನ್ನು' ಶೋಧಿಸಿ, ಕಾವ್ಯ-ಭಾಷೆಗಳಿಗೆ, 'ಜೀವ-ಧ್ವನಿ' ತುಂಬಿ, 'ಕಾತರ್ಿಕದ ಮೋಡ'ದಲ್ಲಿ ಸಂಭ್ರಮಿಸಿ, 'ಜೀನಿಯಾ'ದಲ್ಲಿ ಭಾವ ಪುಷ್ಪವರಳಿಸಿ, ಶಿಶಿರದಲ್ಲಿ ಬಂದ ಸ್ನೇಹಿತನಿಗೆ 'ಹಕ್ಕೀಪುಚ್ಛ'ವನ್ನು ಪ್ರೀತಿಯಿಂದ ಅರ್ಪಿಸಿ, ನಿಸರ್ಗದಲ್ಲಿ ಮುಳುಗಿ, ವಾಸ್ತವತೆಯಲ್ಲಿ ಎದ್ದ ಸಮನ್ವಯ ಕವಿ, ಕಣವಿಯವರು. 

ಇಂತಹ ಕವಿ ಚೇತನಕ್ಕೆ ಕನ್ನಡನಾಡಿನ ಅನೇಕ ಪ್ರಶಸ್ತಿ-ಗೌರವಗಳು ದೊರೆತಿರುವುದು ಪ್ರತಿಭೆಗೆ ಸಂದ ಪುರಸ್ಕಾರಗಳಾಗಿವೆ. 'ಕವನ ಕಲಾರವಿ' ಪ್ರಶಸ್ತಿ, 'ಜೀವಧ್ವನಿ' ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 'ಕನರ್ಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ', ಕನರ್ಾಟಕ ಸರಕಾರದಿಂದ 'ರಾಜ್ಯೋತ್ಸವ ಪ್ರಶಸ್ತಿ', ಗುಲ್ಬಗರ್ಾದ ಎಸ್.ಆರ್.ಪಾಟೀಲ ಪ್ರತಿಷ್ಠಾನ ಪ್ರಶಸ್ತಿ', ಇಳಕಲ್ಲಿನ ಚಿತ್ತರಗಿ ಶ್ರೀವಿಜಯ ಮಹಾಂತೇಶ್ವರ ಸಂಸ್ಥಾನ ಮಠದ 'ಬಸವ ಕಾರುಣ್ಯ ಪ್ರಶಸ್ತಿ', ಕನರ್ಾಟಕ ಸರಕಾರದ 'ಪಂಪ ಪ್ರಶಸ್ತಿ', ಬಾದಾಮಿಯ ವಿಶ್ವಚೇತನದ 'ಚಾಲುಕ್ಯ ಪ್ರಶಸ್ತಿ', ಹಂಪಿ ಕನ್ನಡ ವಿಶ್ವವಿದ್ಯಾಲಯದ 'ನಾಡೋಜ ಪ್ರಶಸ್ತಿ', ಇತ್ತೀಚೆಗೆ 'ಸಂದೇಶ ಸಮ್ಮಾನ್'ಪ್ರಶಸ್ತಿಗಳು ದೊರೆತಿರುವುದು ನಿಜಕ್ಕೂ ಕನ್ನಡದೇವಿಗೆ ಸಂದ ಪ್ರಶಸ್ತಿಗಳಾಗಿವೆ. ಹಾಸನದಲ್ಲಿ ನಡೆದ 65ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆಯ ಗರಿ, 'ಚೆಂಬೆಳಕು', 'ಮುಗಿಯದ ಹಾಡು', 'ಬೆಳ್ಳಿತೇರಿನ ದಾರಿ' ಇವು ಇವರಿಗೆ ಸಂದ ಗೌರವ ಗ್ರಂಥಗಳಾಗಿವೆ. 

ಸುಮಾರು 50-60 ವರ್ಷಗಳ ಅವಧಿಯಲ್ಲಿ ಕಾವ್ಯಸಾಧನೆ ಮಾಡಿ 400 ಕ್ಕೂ ಹೆಚ್ಚು ಕವಿತೆಗಳನ್ನು 14 ಕವನ ಸಂಕಲನಗಳನ್ನು  ಹೊರತಂದು, ಪ್ರಕೃತಿ-ಮನುಷ್ಯ, ಭಾವ-ಭಾಷೆಗಳ, ಯಥಾರ್ಥ-ಆದರ್ಶಗಳ ಸಮನ್ವಯದಿಂದ ಕಾವ್ಯಸಾಧನೆ ಮಾಡಿ, ಕನ್ನಡ ಕಾವ್ಯಕ್ಷೇತ್ರಕ್ಕೆ ಅಮೂಲ್ಯವಾದ ಹಾಗೂ ಅನನ್ಯವಾದ ಕೊಡುಗೆಯನ್ನು ನೀಡಿ, ಜನಪದ ಭಾಷೆಯನ್ನು ಕಾವ್ಯ ಭಾಷೆಯನ್ನಾಗಿಸಿಕೊಂಡು, ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿ, ಕನ್ನಡ ರಾಜರಾಜೇಶ್ವರಿಗೆ ತಮ್ಮ ಅನನ್ಯವಾದ ಕಾವ್ಯಮಾಲೆಯನ್ನಪರ್ಿಸಿ ತಮ್ಮ 'ಚಿರಂತನ ದಾಹ' ಕ್ಕೆ ಕಾವ್ಯಧಾರೆಯೆನ್ನೆರೆದು ತಣಿದ ತೃಪ್ತಜೀವಿ,  ಧೀಮಂತ ಕವಿ ಚೆನ್ನವೀರಕಣವಿ. 

ಜಗವ ತುಂಬಿದ ಬೆಳಕು ನವಗೇಕೋ ಸಾಲದಿದೆ
ಎನಿತು ಮಾನವನೆದೆಯ ಆಳ ಅಗಲ
ಬಂದಷ್ಟು ಇಂಗುತಿದೆ ಮತ್ತೆ ಬರಿದಾಗುತಿದೆ
ಎಷ್ಟು ಸೆಲೆಯೊಡೆದರೂ ವಿಫಲ ವಿಫಲ!


 - ಭಾರತಿ 

No comments:

Post a Comment